ನವದೆಹಲಿ, : ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಉತ್ಪಾದನೆಯನ್ನು ಭಾರತದಲ್ಲಿ ಸೋಮವಾರದಿಂದ ಆರಂಭಿಸಲಾಗಿದೆ. ದಿ ರಷ್ಯನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್(ಆರ್‌ಡಿಐಎಫ್) ಸಹಯೋಗದೊಂದಿಗೆ ಭಾರತದ ಅತಿ ದೊಡ್ಡ ಲಸಿಕೆ ಮತ್ತು ಔಷಧೀಯ ಸಂಸ್ಥೆಗಳಲ್ಲಿ ಒಂದಾದ ಪನಾಶಿಯಾ ಈ ಲಸಿಕೆಯನ್ನು ಉತ್ಪಾದಿಸಲು ಆರಂಭಿಸಿದೆ. ಆರ್‌ಡಿಎಫ್ ಪ್ರಕಾರ ಭಾರತದ ಪನಾಶಿಯಾ ಸಂಸ್ಥೆ ವರ್ಷಕ್ಕೆ 10 ಕೋಟಿ ಲಸಿಕೆಯನ್ನು ಉತ್ಪಾದನೆ ಮಾಡಲಿದೆ ಎಂದು ತಿಳಿಸಿದೆ.
ಭಾರತದಲ್ಲಿ ಉತ್ಪಾದನೆಯಾದ ಮೊದಲ ಬ್ಯಾಚ್‌ನ ಲಸಿಕೆಯನ್ನು ‘ಸ್ಪಿಟ್ನಿಕ್ ವಿ’ ಲಸಿಕೆಯನ್ನು ರಷ್ಯಾಗೆ ಗುಣಮಟ್ಟ ನಿಯಂತ್ರಣಕ್ಕಾಗಿ ರವಾನಿಸಲಾಗುತ್ತದೆ. ಮಾಸ್ಕೋದಲ್ಲಿರುವ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಗಮಲೆಯಾದಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ಆರ್‌ಡಿಐಎಫ್ ಮಾಹಿತಿಯನ್ನು ನೀಡಿದೆ. ಈ ಬೇಸಿಗೆಯಲ್ಲಿ ಪೂರ್ಣ ಪ್ರಮಾಣದ ಉತ್ಪಾದನೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಆರ್‌ಡಿಐಎಫ್ ತಿಳಿಸಿದೆ.
ಭಾರತದಲ್ಲಿ ಈವರೆಗೆ ಕೇವಲ ಎರಡು ಲಸಿಕೆಗಳಿಗೆ ಮಾತ್ರವೇ ಅನುಮತಿಯನ್ನು ನೀಡಲಾಗಿತ್ತು. ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಹಾಗೂ ಸೀರಂ ಇನ್ಸ್ಟಿಟ್ಯೂಟ್ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಯನ್ನು ಮಾತ್ರವೇ ಭಾರತದಲ್ಲಿ ನೀಡಲಾಗುತ್ತಿದೆ. ಈಗ ರಷ್ಯಾದ ಸ್ಪುಟ್ನಿಕ್‌ಗೂ ಭಾರತದಲ್ಲಿ ಅನುಮತಿಯನ್ನು ನೀಡುವ ಮೂಲಕ ಮೂರನೇ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಸದ್ಯ ಭಾರತದಲ್ಲಿ ಕೊರೊನಾ ವೈರಸ್‌ನ ಲಸಿಕೆಗಳ ಕೊರತೆ ದೊಡ್ಡ ಪ್ರಮಾಣದಲ್ಲಿ ಉಂಟಾಗಿದೆ. ಕೊರೊನಾ ವೈರಸ್‌ನ ಎರಡನೇ ಅಲೆ ದೊಡ್ಡ ಪ್ರಮಾಣದಲ್ಲಿ ಆಘಾತವನ್ನು ನೀಡಿದ ಪರಿಣಾಮವಾಗಿ ಲಸಿಕಾ ಕಾರ್ಯಕ್ರಮಕ್ಕೆ ಚುರುಕು ಮುಟ್ಟಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ ಬೇಡಿಕೆಗೆ ಅನುಗುಣವಾಗಿ ಲಸಿಕೆ ಸದ್ಯ ಉತ್ಪಾದನೆಯಾಗದ ಕಾರಣ ಲಸಿಕೆ ಕಾರ್ಯಕ್ರಮಕ್ಕೆ ದೊಡ್ಡ ಹಿನ್ನೆಡೆಯಾಗಿದೆ. ಈ ಸಂದರ್ಭದಲ್ಲಿ ಸ್ಪುಟ್ನಿಕ್ ಲಸಿಕೆಗೆ ಭಾರತದಲ್ಲಿ ಅನುಮತಿ ದೊರೆತು ಉತ್ಪಾದನೆ ಆರಂಭವಾಗಿರುವುದು ಪ್ರಮುಖ ಬೆಳವಣಿಕೆಯಾಗಿದೆ.
Laxmi News 24×7