ವಿಜಯನಗರ: ಕರೊನಾ ನಗರಗಳಿಗೆ ಮಾತ್ರ ಸೀಮಿತವಾಗದೆ ಹಳ್ಳಿ ಹಳ್ಳಿಗೂ ಹಬ್ಬಲಾರಂಭಿಸಿದೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವರು ವೈದ್ಯರಂತೆ ನಾಟಕವಾಡಿ ಜನಸಾಮಾನ್ಯರಿಂದ ಹಣ ಲೂಟಿ ಮಾಡುವ ಕೆಲಸಕ್ಕೂ ಮುಂದಾಗಿದ್ದಾರೆ. ಅದೇ ರೀತಿಯ ಘಟನೆ ವಿಜಯನಗರ ಜಿಲ್ಲೆಯಲ್ಲೂ ನಡೆದಿದ್ದು, ಗ್ರಾಮವನ್ನೇ ಸೀಲ್ಡೌನ್ ಮಾಡುವಂತಹ ಸ್ಥಿತಿ ಬಂದೊದಗಿದೆ.
ಹೌದು! ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ಈ ಗ್ರಾಮದಲ್ಲಿ ಕೆಲ ನಕಲಿ ಡಾಕ್ಟರ್ಗಳು ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ಕರೊನಾ ಲಕ್ಷಣವಿರುವ ರೋಗಿಗಳಿಗೆ ಅವರೇ ಚಿಕಿತ್ಸೆ ನೀಡುತ್ತಿದ್ದು, ಅದರಿಂದಾಗಿ ಸೋಂಕು ಇನ್ನಷ್ಟು ಹೆಚ್ಚಾಗುತ್ತಿದೆ ಎನ್ನಲಾಗಿದೆ.
ಈಗಾಗಲೇ ತಂಬ್ರಹಳ್ಳಿ ಗ್ರಾಮದ 61 ಮಂದಿಗೆ ಸೋಂಕು ದೃಢವಾಗಿದೆ. 5 ಸೋಂಕಿತರು ಸಾವನ್ನಪ್ಪಿದ್ದಾರೆ, 4 ಕ್ಕೂ ಅಧಿಕ ಕೋವಿಡೇತರ ರೋಗಿಗಳು ಕೊನೆಯುಸಿರೆಳೆದಿದ್ದಾರೆ. ಆ ಹಿನ್ನೆಲೆಯಲ್ಲಿ ತಹಶಿಲ್ದಾರ್ ಶರಣಮ್ಮ ಪೂರ್ತಿ ಗ್ರಾಮವನ್ನೇ ಸೀಲ್ಡೌನ್ ಮಾಡಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದಾರೆ