ಹೈದರಾಬಾದ್: ಪತಿಯೊಬ್ಬ ಪತ್ನಿಯನ್ನು ಕೊಂದು ನಂತರ ಕುತ್ತಿಗೆ ಕೊಯ್ದುಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಅರುಣಾ (29) ಕೊಲೆಯಾದ ಪತ್ನಿ. ಆರೋಪಿ ಪತಿ ಪ್ರಭಾಕರ್ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಭಾಕರ್ ಎಂಟು ವರ್ಷಗಳ ಹಿಂದೆ ಕರ್ನಾಟಕದ ಕೋಲಾರ ಮೂಲದ ಅರುಣಾ ಜೊತೆ ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಭಾಕರ್ ಕುರಿಗಳನ್ನು ಸಾಕುತ್ತಾ ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು.
ಇತ್ತೀಚೆಗೆ ಪ್ರಭಾಕರ್ ಪತ್ನಿ ಅರುಣಾ ಬಗ್ಗೆ ಅನುಮಾನ ಪಡುತ್ತಿದ್ದನು. ಅಲ್ಲದೇ ಪ್ರಭಾಕರ್ ರೆಡ್ಡಿ ಮದ್ಯ ಕುಡಿದು ಬಂದು ಪ್ರತಿದಿನ ಜಗಳ ಮಾಡುತ್ತಿದ್ದನು. ಹೀಗಾಗಿ ಹಿರಿಯರು ರಾಜಿ ಪಂಚಾಯಿತಿ ಮಾಡಿ ದಂಪತಿಗೆ ಬುದ್ಧಿವಾದ ಹೇಳಿದ್ದರು.
ದಂಪತಿ ಕುರಿಗಳಿಗೆ ಮೇವು ತರಲು ತಮ್ಮ ಜಮೀನಿನ ಬಳಿ ಹೋಗಿದ್ದರು. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ಕೋಪದಿಂದ ಪತಿ ಪ್ರಭಾಕರ್ ತನ್ನ ಬಳಿಯಿದ್ದ ಕುಡುಗೋಲಿನಿಂದ ಪತ್ನಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ನಂತರ ಅದೇ ಕುಡುಗೋಲಿನಿಂದ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು.
ಈ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಎಸ್‍ಐ ಮಹೇಶ್‍ಬಾಬು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಪ್ರಭಾಕರ್ ರೆಡ್ಡಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ.