ಬಾಗಲಕೋಟೆ: ಕೊರೊನಾ ಸೋಂಕಿನಿಂದ ಬಿಡುಗಡೆಯಾದ ಬಳಿಕ ಜವಾಬ್ದಾರಿ ಮರೆತ ಸ್ಥಳೀಯ ಪತ್ರಿಕೆ ಪತ್ರಕರ್ತ ಹಾಗೂ ಪೊಲೀಸ್ ಸಿಬ್ಬಂದಿ ಹುಚ್ಚಾಟ ಮೆರೆದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ರಾಮಪೂರದಲ್ಲಿ ನಡೆದಿದೆ.
ಇಬ್ಬರೂ ಕೊರೊನಾ ಸೋಂಕಿನಿಂದ ಬಿಡುಗಡೆ ಆಗಿದ್ದಕ್ಕೆ ಊರಲ್ಲಿ ಅಭಿಮಾನಿಗಳಿಂದ ಸಂಭ್ರಮ ಎಂಬ ಹುಚ್ಚಾಟ ನಡೆದಿದೆ. ಕೋವಿಡ್‍ನಿಂದ ಗುಣಮುಖ ಆಗಿ ಬಂದಿದ್ದಕ್ಕೆ ಇಬ್ಬರಿಗೆ ಅದ್ಧೂರಿ ಸ್ವಾಗತ ಕೋರಿದ್ದಲ್ಲದೇ ಗುಂಪು ಗುಂಪು ಸೇರಿ ಸಂಭ್ರಮಾಚರಣೆ ಮಾಡಿದ್ದಾರೆ. ಜೊತೆಗೆ ಗಲ್ಲಿಯಲ್ಲಿ ಪಟಾಕಿ ಸಿಡಿಸಿ, ಹೂವಿನ ಮಳೆಗರೆದು ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಹಾಡಿದ್ದಾರೆ.
ಇದಲ್ಲದೇ ಗುಣಮುಖರಾದವರಿಗೆ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿದ್ದಾರೆ. ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಬಳಿಕ ಗುಣಮುಖರಾದವರು ಹೋಂ ಕ್ವಾರಂಟೈನ್ ಆಗಬೇಕು. ಅಲ್ಲದೇ ಸೋಂಕು ಪತ್ತೆಯಾದ ಐದನೇ ದಿನಕ್ಕೆ ಇವರಿಬ್ಬರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೆಲ್ಲ ತಿಳಿದೂ ಬೆಂಬಲಿಗರು ಪಟಾಕಿ ಸಿಡಿಸಿ, ಅಪ್ಪಿಕೊಂಡು, ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದ್ದಾರೆ.