ಬೆಂಗಳೂರು : ದುಡಿಯುವ ವರ್ಗಕ್ಕೆ ಪರಿಹಾರ ನೀಡೋಕೆ ನಾವು ದುಡ್ಡು ಪ್ರಿಂಟ್ ಮಾಡ್ತಿಲ್ಲ ಎಂದ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮ ಸಚಿವರು ನೋಟ್ ಎಣಿಸುವ ಯಂತ್ರವನ್ನು ಇರಿಸಿಕೊಂಡಿದ್ದಾರಲ್ಲಾ ಎಂದು ಟಾಂಗ್ ನೀಡಿದ್ದಾರೆ.
ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮೂರನೇ ಅಲೆ ಎದುರಿಸಲು ಸಿದ್ಧರಾಗಿ ಎಂದು ಕರೆ ಕೊಟ್ಟಿದ್ದಾರೆ.
ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಿ, ನಮ್ಮದೇನು ತಕರಾರು ಇಲ್ಲ. ಎರಡನೇ ಅಲೆಯಲ್ಲಿ ಜನ ಸಾಯುವುದನ್ನು ತಪ್ಪಿಸಲು ಕಾರ್ಯಕ್ರಮ ರೂಪಿಸಬೇಕು. ಆದ್ರೆ ಮೊದಲು ಈ ಅಲೆಯಲ್ಲಿ ಜನ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಮನವಿ ಮಾಡಿಕೊಂಡರು.
ಆಮ್ಲಜನಕ ಲಭ್ಯತೆ ಎಷ್ಟಿದೆ, ಎಲ್ಲಿಂದ ತರಿಸಲಾಗಿದೆ, ಪರಿಸ್ಥಿತಿ ಯಾವ ರೀತಿ ಇದೆ ವ್ಯಾಕ್ಸಿನೇಷನ್ ಎಲ್ಲಿ ನೀಡಲಾಗುತ್ತದೆ ಎಂಬುದು ಸೇರಿದಂತೆ ಎಲ್ಲ ಮಾಹಿತಿಯನ್ನು ಆನ್ಲೈನ್ ಮೂಲಕವೇ ಒದಗಿಸುವ ಕಾರ್ಯ ಆಗಬೇಕು.
ಶಿವಮೊಗ್ಗದಲ್ಲಿ ಒಬ್ಬ ಸಚಿವರು ಹೇಳಿದ್ದಾರೆ ನಮ್ಮ ಬಳಿ ನೋಟನ್ನು ಮುದ್ರಿಸುವ ಯಂತ್ರ ಇಲ್ಲ ಅಂತ. ಅದೇ ನಮ್ಮ ಸಚಿವರು ನೋಟ್ ಎಣಿಸುವ ಯಂತ್ರವನ್ನು ಇರಿಸಿಕೊಂಡಿದ್ದಾರಲ್ಲಾ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.