Breaking News

ಚಾಮರಾಜನಗರ, ಮೈಸೂರು ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಕ್ಷಣಗಣನೆ?

Spread the love

ಚಾಮರಾಜನಗರ, ಮೇ 5: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಮೈಸೂರು ಹಾಗೂ ಚಾಮರಾಜನಗರದ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಮಹತ್ವದ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆ ಸುದೀರ್ಘ ಮಾತುಕತೆಯಲ್ಲಿ ತೊಡಗಿರುವ ಸಿಎಂ ಬಿ.ಎಸ್ ಯಡಿಯೂರಪ್ಪ, ಇಬ್ಬರೂ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಸಾಕಷ್ಟು ಒತ್ತಡ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರಿಗೂ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿ ಆದೇಶ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿದಲ್ಲಿ ಸರ್ಕಾರದ ಮೇಲೆ ಜನತೆಯ ಆಕ್ರೋಶ ಕಡಿಮೆ ಆಗಬಹುದು ಎಂದು ಚಿಂತಿಸಲಾಗುತ್ತಿದೆ. ಎರಡು ಜಿಲ್ಲೆಗಳಲ್ಲಿ ಅಧಿಕಾರಿಗಳ ವಿರುದ್ಧ ಜನತೆ ಅಸಮಾಧಾನಗೊಂಡಿದ್ದು, ವಿಪಕ್ಷ ಶಾಸಕ ಸಾ.ರಾ ಮಹೇಶ್‌, ಹರ್ಷವರ್ಧನ್, ವಿಧಾನ ಪರಿಷತ್‌ ಸದಸ್ಯರಾದ ಮರಿ ತಿಬ್ಬೇಗೌಡ ಬಹಿರಂಗವಾಗಿಯೇ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಕಟುವಾಗಿ ಟೀಕಿಸಿದ್ದರು.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ರಾಜ್ಯ ಸರ್ಕಾರಿ ಮಟ್ಟದಲ್ಲಿ ಪ್ರಭಾವಿಯೇ ಆಗಿದ್ದು, ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್‌ ರವಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಇಬ್ಬರೂ ವರ್ಗಾವಣೆಯಾದಲ್ಲಿ ಜನತೆಯ ಆಕ್ರೋಶ ಕಡಿಮೆ ಆಗಲಿದ್ದು, ಪರಿಸ್ಥಿತಿಯೂ ತಿಳಿ ಆಗಲಿದೆ. ಅಲ್ಲದೇ ಈ ಇಬ್ಬರ ತಲೆದಂಡ ಆದರೆ ಸರ್ಕಾರದ ಮೇಲಿರುವ ಆರೋಪದ ಪ್ರಭಾವವೂ, ಒತ್ತಡವೂ ಕಡಿಮೆ ಆಗಲಿದೆ ಎನ್ನಲಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಮಂಗಳವಾರ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಅರ್ ರವಿ ಅವರು ದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಗಳೇ ನೇರ ಕಾರಣ ಎಂದು ಆರೋಪ ಹೊರಿಸಿ ಬಹಿರಂಗವಾಗಿಯೇ ಟೀಕಿಸಿದ್ದರು. ಇದಕ್ಕೆ ಬುಧವಾರ ಉತ್ತರ ನೀಡಿದ ರೋಹಿಣಿ ಸಿಂಧೂರಿ, ತಮ್ಮ ಮೇಲಿರುವ ಆರೋಪವನ್ನು ನಿರಾಕರಿಸಿದ್ದರು. ಈ ಇಬ್ಬರೂ ಅಧಿಕಾರಿಗಳ ಆರೋಪ, ಪ್ರತ್ಯಾರೋಪದಿಂದ ಮುಂದೆ ಆಡಳಿತದಲ್ಲೂ ಸಮಸ್ಯೆ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಈ ಎಲ್ಲಾ ಕಾರಣಗಳಿಂದ ಇಬ್ಬರನ್ನೂ ವರ್ಗಾವಣೆ ಮಾಡುವುದು ಬಹುತೇಕ ಖಚಿತವಾಗಿದ್ದು, ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಜನಾನುರಾಗಿ ಅಧಿಕಾರಿಗಳನ್ನೇ ನೇಮಿಸುವ ಕುರಿತು ಚರ್ಚೆ ನಡೆದಿದೆ. ಮುಂದಿನ ಕೆಲ ಗಂಟೆಗಳಲ್ಲೇ ವರ್ಗಾವಣೆ ಆದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ