ಬೆಂಗಳೂರು: ಉಪಚುನಾವಣೆ ಮತ ಎಣಿಕೆಯ ದಿನವೇ ಬೆಳಗಾವಿಯ ನಾಯಕರಿಗೆ ಸಿಎಂ ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದಾರೆ.
ಕರ್ನಾಟಕ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಇಂದು ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿಯಾಗಿ ಗೋವಿಂದ ಕಾರಜೋಳ, ಉಮೇಶ್ ಕತ್ತಿಗೆ ಬಾಗಲಕೋಟೆ, ಅರವಿಂದ ಲಿಂಬಾವಳಿಗೆ ಬೀದರ್, ಮುರುಗೇಶ್ ನಿರಾಣಿಗೆ ಕಲಬುರಗಿ, ಅಂಗಾರಗೆ ಚಿಕ್ಕಮಗಳೂರು, ಎಂಟಿಬಿ ನಾಗರಾಜ್ ಅವರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ.

ವಿಶೇಷ ಏನೆಂದರೆ ಬೆಳಗಾವಿ ಜಿಲ್ಲೆಯ 4 ಮಂದಿ ಬಿಎಸ್‍ವೈ ಸಂಪುಟದಲ್ಲಿ ಸಚಿವರಾಗಿ ಅಧಿಕಾರದಲ್ಲಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ್ ಇದ್ದಾರೆ. ಆದರೆ ಇವರಿಗೆ ಜಿಲ್ಲೆಯನ್ನು ಹಂಚಿಕೆ ಮಾಡದೇ ಬಾಗಲಕೋಟೆಯ ಮುಧೋಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಗೋವಿಂದ ಕಾರಜೋಳಗೆ ನೀಡಿದ್ದಾರೆ.

ಸಿಡಿ ಪ್ರಕರಣದಲ್ಲಿ ಸಿಲುಕಿ ರಾಜೀನಾಮೆ ನೀಡುವಾಗ ರಮೇಶ್ ಜಾರಕಿಹೊಳಿ 2 ಷರತ್ತು ಹಾಕಿದ್ದರು. ಜಿಲ್ಲೆ ಉಸ್ತುವಾರಿಯನ್ನು ಜಿಲ್ಲೆಯ ಯಾರಿಗೂ ಕೊಡಬಾರದು ಮತ್ತು ಜಲಸಂಪನ್ಮೂಲ ಇಲಾಖೆ ಖಾತೆಯನ್ನು ಯಾರಿಗೂ ಹಂಚಿಕೆ ಮಾಡಬಾರದು ಎಂದು ಷರತ್ತು ಹಾಕಿದ್ದರು. ಈ ಷರತ್ತನ್ನು ಒಪ್ಪಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಳಗಾವಿಯ ಶಾಸಕರಿಗೆ ಜಿಲ್ಲೆಯ ಉಸ್ತುವಾರಿಯನ್ನು ಹಂಚಿಕೆ ಮಾಡಿಲ್ಲ.
Laxmi News 24×7