Breaking News

ಸಚಿವರೇ ಕಮಿಷನ್ ತಿಂದಿದ್ದು ಸಾಕು, ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಕೊಡಿ, ಜನರ ಕಷ್ಟ ನೋಡಿ – ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

Spread the love

ಬೆಂಗಳೂರು : ‘ಸಚಿವರೇ ಕಮಿಷನ್ ಲೆಕ್ಕ ಹಾಕಿಕೊಂಡು ಕೂತಿದ್ದೀರಾ? ಕಮಿಷನ್ ಹೊಡೆದಿದ್ದು ಸಾಕು. ಹಿಂದೆ ತಿಂದಿದ್ದು ಸಾಕು, ಮುಂದೆ ತಿನ್ನೋದು ಸಾಕು. ಆದಷ್ಟು ಬೇಗ ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣ ಪಾವತಿಸಿ. ಜನರ ಕಷ್ಟದ ಬಗ್ಗೆ ಗಮನ ಹರಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಅವರು ಶಿವಕುಮಾರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್ ಅವರು, ‘ಕೇಂದ್ರ ಸರ್ಕಾರು 18 ರಿಂದ 45 ವರ್ಷದವರು ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಆನ್ ಲೈನ್ ನೋಂದಣಿಗೆ ಸೂಚಿಸಿದೆ. ಸರ್ಕಾರ ದೇಶದ ಎಲ್ಲ ವರ್ಗದ ಬಗ್ಗೆ ಯೋಚಿಸುತ್ತಿದೆಯೋ ಅಥವಾ ಒಂದು ವರ್ಗದ ಬಗ್ಗೆ ಮಾತ್ರ ಯೋಚಿಸುತ್ತಿದೆಯೇ ಎಂಬುದು ಅರ್ಥವಾಗುತ್ತಿಲ್ಲ. ನಾನು ಆನ್ ಲೈನ್ ನೋಂದಣಿ ಮಾಡಿಸಬೇಕು ಎಂದರೆ ಬೇರೆಯವರ ಸಹಾಯ ಪಡೆಯಬೇಕಾಗುತ್ತದೆ. ಇನ್ನು ಹಳ್ಳಿ ಜನರ ಪರಿಸ್ಥಿತಿ ಏನು? ಅವರಿಗೆ ಆನ್ ಲೈನ್ ಸೌಲಭ್ಯ ಇದೆಯೇ? ಆನ್ ಲೈನ್ ನೋಂದಣಿ ಮಾಡಿದವರಿಗೆ ಮಾತ್ರ ಹಾಕುವ ಯೋಚನೆಯೋ? ಈ ಹಿಂದೆ ಮನೆ ಬಾಗಿಲಿಗೆ ಹೋಗಿ ಪೊಲೀಯೋ ಲಸಿಕೆ ಹಾಕಿದಂತೆ ಈಗ ಕೊರೋನಾ ಲಸಿಕೆಯನ್ನೂ ನೀಡಬೇಕು ಎಂಬುದು ಆಗ್ರಹಿಸಿದರು.

ರಾಜ್ಯದಲ್ಲಿ ನಾಳೆಯಿಂದ ಲಸಿಕೆ ನೀಡಲು ಸಾಧ್ಯವಿಲ್ಲ, ವಿಳಂಬವಾಗುತ್ತದೆ ಎಂದು ಸರ್ಕಾರವೇ ಹೇಳುತ್ತಿದೆ. ಕೊರೋನಾ ಬಂದು ವರ್ಷವಾಗಿದೆ. ಆದರೂ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೇ, ಸರ್ಕಾರ ಜನರನ್ನು ಸಂಕಟಕ್ಕೆ ತಳ್ಳುತ್ತಿದೆ. ಬರೀ ಸುಳ್ಳು ಹೇಳಿ ತನ್ನ ಹುಳುಕು ಮುಚ್ಚಿಕೊಳ್ಳುತ್ತಿದೆ. ನನ್ನ ಕ್ಷೇತ್ರದಲ್ಲೇ 17 ಜನ ಸತ್ತಿದ್ದರೂ 4 ಜನ ಸತ್ತಿದ್ದಾರೆ ಎಂದು ಸುಳ್ಳು ಅಂಕಿ-ಅಂಶ ತೋರಿಸುತ್ತಿದೆ. ವಾಸ್ತವದ ಶೇ.20 ರಷ್ಟನ್ನು ಅಂಕಿ-ಅಂಶದಲ್ಲಿ ತೋರಿಸುತ್ತಿಲ್ಲ. ಸರ್ಕಾರ ಕೊರೋನಾ ಸಾವಿನ ಪ್ರಮಾಣದ ಬಗ್ಗೆ ಪರಿಶೀಲನೆ ನಡೆಸಬೇಕು. ಸತ್ತವರ ಮನೆಗೆ ಅಧಿಕಾರಿಗಳನ್ನು ಕಳುಹಿಸಿ, ಸಾವಿಗೆ ಕಾರಣ ತಿಳಿಯಬೇಕು. ಕಾಂಗ್ರೆಸ್ ಕಾರ್ಯಕರ್ತರು ಕೊರೋನಾ ಸಾವಿನ ವಾಸ್ತವಾಂಶವನ್ನು ಕೆಪಿಸಿಸಿ ಕಚೇರಿಗೆ ರವಾನಿಸಬೇಕು ಎಂದರು.

ಲಸಿಕೆ ವಿಚಾರದಲ್ಲಿ ಸರ್ಕಾರ ತಯಾರಿ ಮಾಡಿಕೊಳ್ಳದಿದ್ದರೂ ಲಸಿಕೆ ಅಭಿಯಾನ ಘೋಷಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಭಾರತದಲ್ಲಿ ಸರಕಾರ ಕೊರೋನಾ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ವಿವರವಾಗಿ ವರದಿ ಮಾಡುತ್ತಿವೆ. ನಾನು ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಒಂದು ವಿಚಾರ ಕೇಳುತ್ತೇನೆ. ಈ ಪರಿಸ್ಥಿತಿ ನಿಯಂತ್ರಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಾಗಿದೆ. ಆದರೂ ಯಾಕೆ ಸುಳ್ಳುಗಳನ್ನು ಹೇಳುತ್ತಿದ್ದೀರಿ ಎಂದರು.

ಲಾಕ್ ಡೌನ್ ಹೇರಿರುವ ಹಿನ್ನೆಲೆಯಲ್ಲಿ ಸರಕಾರವು ಜನರಿಗೆ ಆರ್ಥಿಕ ನೆರವು ನೀಡಬೇಕು. ಈಗಾಗಲೇ ಜನ ವಲಸೆ ಹೋಗುತ್ತಿದ್ದಾರೆ. ಕಾರ್ಮಿಕರು ಗುಳೆ ಹೋಗುವುದನ್ನು ನಿಲ್ಲಿಸಲು ಆರ್ಥಿಕ ಪ್ಯಾಕೇಜ್ ಅನಿವಾರ್ಯ. ಕಳೆದ ವರ್ಷ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಹಾಸಿಗೆ ಪಡೆದಿತ್ತು. ಈ ವರ್ಷವೂ ಶೇ. 80 ರಷ್ಟು ಪಡೆದಿದೆ. ಆದರೆ ಅವರಿಗೆ ಕಳೆದ ವರ್ಷದ ಬಾಕಿಯನ್ನೇ ಕೊಟ್ಟಿಲ್ಲ. ಈ ಆಸ್ಪತ್ರೆಗಳಲ್ಲಿ ನರ್ಸ್ ಗಳಿಗೆ ಕೊಡಲು, ಔಷದಿ, ಆಕ್ಸಿಜನ್ ಖರೀದಿಗೆ ದುಡ್ಡಿಲ್ಲದಂತಾಗಿದೆ ಎಂದರು.

ರೆಮ್ಡಿಸಿವಿಯರ್ ಪೂರೈಸುತ್ತಿರುವ ಡ್ರಗ್ ಕಂಟ್ರೋಲರ್ ಗಳ ಫೋನ್ ಆಫ್ ಆಗಿವೆ. ನೀವು ಕೆಲವು ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಇವುಗಳನ್ನು ಪೂರೈಸುತ್ತಿದ್ದೀರಿ ಹೊರತು, ಬೇರೆ ಯಾರಿಗೂ ಕೊಡುತ್ತಿಲ್ಲ. ನಮಗೆ ರೆಮ್ಡಿಸಿವಿಯರ್ ಬೇಕು ಎಂದು ನೂರಾರು ಮಂದಿ ಕರೆ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲ ಆಸ್ಪತ್ರೆಗಳಿಗೂ ಇದನ್ನು ಪೂರೈಸಬೇಕು. ಕೂಡಲೇ ಆಸ್ಪತ್ರೆಗಳಿಗೆ ಹಣ ಪಾವತಿ ಮಾಡಬೇಕು. ಯಾರಿಗೆ ಹಣ ಕೊಟ್ಟಿದ್ದೀರಿ ಎಂಬುದರ ಬಗ್ಗೆ ಪಟ್ಟಿ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದಿಂದ 10 ಆಂಬುಲೆನ್ಸ್ ಗಳನ್ನು ಸಿದ್ಧಪಡಿಸಲಾಗಿದೆ. ಮಾಜಿ ಮೇಯರ್ ಗಳು, ಕಾರ್ಯಾಧ್ಯಕ್ಷರುಗಳ ಜತೆ ಸಭೆ ನಡೆಸಿದ್ದೇನೆ. ನಾವು ಸೋಂಕಿತರಿಗೆ, ಸತ್ತವರ ಕುಟುಂಬಕ್ಕೆ ಹೇಗೆ ನೆರವಾಗಬಹುದು ಎಂಬುದರ ಬಗ್ಗೆ ಚರ್ಚಿಸಿದ್ದೇನೆ. ಸರಕಾರವು ಮಾಧ್ಯಮಗಳಲ್ಲಿ ಪ್ರಕಟಿಸಿದ್ದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಯಾರೂ ಅದನ್ನು ಸ್ವೀಕರಿಸುತ್ತಿಲ್ಲ. ನಮ್ಮ ಸಹಾಯವಾಣಿಗೆ 3 ಸಾವಿರಕ್ಕೂ ಹೆಚ್ಚು ಮಂದಿ ಕರೆ ಮಾಡಿದ್ದಾರೆ. 100 ಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ನೆರವಾಗಿದ್ದಾರೆ. 300ಕ್ಕೂ ಹೆಚ್ಚು ಸೋಂಕಿತರಿಗೆ ವೈದ್ಯರಿಂದ ಮಾರ್ಗದರ್ಶನ ಕೊಡಿಸಿ, ಔಷಧಿಗಳನ್ನು ನೀಡಲಾಗಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪಕ್ಷದ ಸಹಾಯವಾಣಿ ಆರಂಭಿಸಲು ಸೂಚಿಸಿದ್ದೇವೆ. ಈ ಸಮಯದಲ್ಲಿ ಎಷ್ಟೇ ಕಷ್ಟವಾದರೂ ಜನರ ಜತೆ ಇರಬೇಕು ಎಂದು ಕೆಲಸ ಮಾಡುತ್ತಿದ್ದೇವೆ ಎಂದರು.

ಪಕ್ಷದ ಚಿಹ್ನೆಗಳ ಮೇಲೆ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ 10 ಸಂಸ್ಥೆಗಳ ಪೈಕಿ 7ರಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಜನರ ಆಶೀರ್ವಾದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ರಾಮನಗರದಲ್ಲಿ ನಮ್ಮ ಪಕ್ಷದಿಂದ ಸ್ಪರ್ಧಿಸಿದ್ದ ಒಬ್ಬ ಹೆಣ್ಣುಮಗಳು ಕೆಲ ದಿನಗಳ ಹಿಂದೆ ಕೊರೋನಾದಿಂದ ಮೃತಪಟ್ಟಿದ್ದು, ಚುನಾವಣೆಯಲ್ಲಿ ಆಕೆ ಗೆದ್ದಿದ್ದಾಳೆ. ಉಳಿದಂತೆ ರಾಮನಗರ, ಗುಡಿಬಂಡೆ, ಭದ್ರಾವತಿ, ತೀರ್ಥಹಳ್ಳಿ, ಬೇಲೂರು, ಬೀದರ್, ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ ಎಂದರು.

ಬಿಜೆಪಿ ಸರ್ಕಾರದ ದುರಾಡಳಿತವನ್ನು ಜನ ತಿರಸ್ಕರಿಸುತ್ತಿರುವುದಕ್ಕೆ ಈ ಚುನಾವಣೆ ಫಲಿತಾಂಶವೇ ಸಾಕ್ಷಿ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ನಮ್ಮ ಪಕ್ಷ ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿತ್ತು. ಆದರೆ ಆಗ ಪಕ್ಷದ ಚಿಹ್ನೆ ಇಲ್ಲ ಎಂದು ಕೆಲವರು ಮಾತನಾಡಿದ್ದರು. ಈ ಸ್ಥಳೀಯ ಸಂಸ್ಥೆ ಚುನಾವಣೆ ಪಕ್ಷದ ಚಿಹ್ನೆ ಆಧಾರದ ಮೇಲೆ ನಡೆದಿದ್ದು, 266 ವಾರ್ಡ್ ಗಳ ಪೈಕಿ ಕಾಂಗ್ರೆಸ್ 119, ಬಿಜೆಪಿ 56, ಜೆಡಿಎಸ್ 67 ಹಾಗೂ 14 ರಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ 14ರಲ್ಲಿ 11 ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿದ್ದಾರೆ ಎಂದರು.

ರಾಜ್ಯದಲ್ಲಿ ಬದಲಾವಣೆ ಬಯಸಿ ಕಾಂಗ್ರೆಸ್ ಗೆ ಮತ ನೀಡಿರುವ ಎಲ್ಲ ಮತದಾರರಿಗೆ, ಕಾರ್ಯಕರ್ತರು, ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.


Spread the love

About Laxminews 24x7

Check Also

ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ

Spread the love ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಉದ್ಘಾಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ