ಭೋಪಾಲ್, ಮಧ್ಯಪ್ರದೇಶದಲ್ಲಿ ಕೋವಿಡ್‌ನಿಂದ ಮೃತಪಟ್ಟ ಸಂಖ್ಯೆಯನ್ನು ಸರ್ಕಾರ ಅಡಗಿಸುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಅಲ್ಲಿನ ಆರೋಗ್ಯ ವ್ಯವಸ್ಥೆಯ ಹೀನಾಯ ಸ್ಥಿತಿಯನ್ನು ತೋರಿಸುವ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಶಿವಪುರಿಯಲ್ಲಿ ವಾರ್ಡ್ ಬಾಯ್ ಒಬ್ಬಾತ ಕೋವಿಡ್ ರೋಗಿಗೆ ಅಳವಡಿಸಿದ್ದ ಆಕ್ಸಿಜನ್ ಮಾಸ್ಕ್ ಅನ್ನು ತೆಗೆದುಹಾಕಿದ್ದಾನೆ. ಇದರಿಂದ ಆಮ್ಲಜನಕವಿಲ್ಲದೆ ವೃದ್ಧ ರೋಗಿ ನರಳಿ ಮೃತಪಟ್ಟಿದ್ದಾರೆ. ಈ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುರೇಂದ್ರ ಶರ್ಮಾ ಎಂಬ ರೋಗಿಯನ್ನು
ಶಿವಪುರಿಯ ಆಸ್ಪತ್ರೆಯೊಂದರ ಕೋವಿಡ್ ವಾರ್ಡ್‌ಗೆ ದಾಖಲಿಸಲಾಗಿತ್ತು. ಅವರಿಗೆ ಅಳವಡಿಸಿದ್ದ ಆಕ್ಸಿಜನ್ ಮಾಸ್ಕ್ ಅನ್ನು ಮಧ್ಯರಾತ್ರಿ ವೇಳೆ ವಾರ್ಡ್ ಬಾಯ್ ತೆಗೆದುಹಾಕಿದ್ದಾನೆ. ಇದರಿಂದಾಗಿ ಅವರು ಮೃತಪಟ್ಟಿದ್ದಾರೆ.
ಸುರೇಂದ್ರ ಶರ್ಮಾ ಅವರ ಸಾವಿಗೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ಅವರ ಮಗ ದೀಪಕ್ ಶರ್ಮಾ ಹಾಗೂ ಕುಟುಂಬದವರು ಆರೋಪಿಸಿದ್ದಾರೆ. ವಾರ್ಡ್ ಬಾಯ್ ಬರುವ ಕೆಲವು ಸಮಯ ಮುಂಚೆಯಷ್ಟೇ ದೀಪಕ್ ತಮ್ಮ ತಂದೆಯ ಜತೆಗಿದ್ದರು. ಆರಂಭದಲ್ಲಿ ಆಸ್ಪತ್ರೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದರೂ, ವಾರ್ಡ್ ಬಾಯ್ ಆಕ್ಸಿಜನ್ ಮಾಸ್ಕ್ ತೆಗೆಯುವ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಬಹಿರಂಗವಾಗಿದ್ದರಿಂದ ಪೇಚಿಗೆ ಸಿಲುಕಿದೆ. ‘ನನ್ನ ತಂದೆ ಕೆಲವು ದಿನಗಳಿಂದ ಇಲ್ಲಿ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಕೆಯಾಗುತ್ತಿತ್ತು. ಆದರೆ ಅವರ ಆಕ್ಸಿಜನ್ ಮಾಸ್ಕ್ ತೆಗೆದುಹಾಕಿದ್ದರಿಂದ ಅವರು ಬೆಳಿಗ್ಗೆ ಒದ್ದಾಡಿದ್ದಾರೆ. ಆಕ್ಸಿಜನ್ ಮಾಸ್ಕ್ ನೀಡುವಂತೆ ನರ್ಸ್ ಹಾಗೂ ವೈದ್ಯರಿಗೆ ಮನವಿ ಮಾಡಿದರೂ ಅವರು ನಿರಾಕರಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ನನ್ನ ತಂದೆ ಉಸಿರಾಟ ನಿಲ್ಲಿಸಿದ್ದಾರೆ’ ಎಂದು ದೀಪಕ್ ಆರೋಪಿಸಿದ್ದಾರೆ.
ಸುರೇಂದ್ರ ಶರ್ಮಾ ಅವರ ಆರ್‌ಟಿ ಪಿಸಿಆರ್ ವರದಿ ಬಿಡುಗಡೆಯಾಗಿರಲಿಲ್ಲ. ಆದರೂ ಅವರನ್ನು ಇತರೆ ರೋಗಿಗಳೊಂದಿಗೆ ಐಸೋಲೇಷನ್ ವಾರ್ಡ್‌ನಲ್ಲಿ ದಾಖಲಿಸಲಾಗಿತ್ತು. ವಾರ್ಡ್ ಬಾಯ್ ಆಕ್ಸಿಜನ್ ಮಾಸ್ಕ್ ತೆಗೆಯುವಾಗ ಅಲ್ಲಿ ಸೆಕ್ಯುರಿಟಿ ಗಾರ್ಡ್ ಕೂಡ ಇದ್ದು, ಆತನನ್ನು ತಡೆಯಲು ಮುಂದಾಗದೆ ಇರುವುದು ವಿಡಿಯೋದಲ್ಲಿ ದಾಖಲಾಗಿದೆ.