Breaking News

ಮುಷ್ಕರ ನಿರತರಿಂದ 60 ಬಸ್ಸುಗಳಿಗೆ ಹಾನಿ,152 ಕೋಟಿ ರೂ.ಆದಾಯ ನಷ್ಟ : ಸಚಿವ ಲಕ್ಷ್ಮಣ ಸವದಿ

Spread the love

ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರ ವಿಚಾರದಲ್ಲಿ ನಮ್ಮ ಸರ್ಕಾರ ಎಷ್ಟೇ ಸಮಾಧಾನ, ಸೌಹಾರ್ದದ ಕ್ರಮ ಅನುಸರಿಸುತ್ತಿದ್ದರೂ ಸಹ ಕಳೆದ 7 ದಿನಗಳಲ್ಲಿ ರಾಜ್ಯಾದ್ಯಂತ 60 ಸರ್ಕಾರಿ ಬಸ್ಸುಗಳ ಮೇಲೆ ದಾಳಿ ಮಾಡಿ ಹಾನಿಗೊಳಿಸಿದ್ದು ತೀರ ಖಂಡನೀಯ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಕುರಿತು ಇಂದು ತಮ್ಮ ಅಧಿಕೃತ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿರುವ ಅವರು, ಕೆ.ಎಸ್.ಆರ್.ಟಿ.ಸಿ.ಯ 34, ಬಿ.ಎಂ.ಟಿ.ಸಿ.ಯ 3, ಈಶಾನ್ಯ ಸಾರಿಗೆಯ 20 ಮತ್ತು ವಾಯುವ್ಯ ಸಾರಿಗೆಯ 3 ಬಸ್ಸುಗಳು ಸೇರಿದಂತೆ ಒಟ್ಟು ಅರವತ್ತು ಬಸ್ಸುಗಳು ಪ್ರತಿಭಟನಾಕಾರರ ದುಷ್ಕೃತ್ಯಕ್ಕೆ ಈಡಾಗಿ ಹಾನಿಗೊಂಡಿವೆ. ಇದರಲ್ಲಿ ಕೆಲವೊಂದು ವೋಲ್ವೋದಂಥ ದುಬಾರಿ ಬಸ್ಸುಗಳೂ ಸೇರಿವೆ. ಬಸ್ಸುಗಳಲ್ಲಿ ಹಾನಿಗೊಳಿಸಿದ ಈ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದಿದ್ದಾರೆ.

ಬಸ್ಸುಗಳೆಂದರೆ ಸಾರಿಗೆ ವ್ಯವಸ್ಥೆಯ ಆತ್ಮಗಳಿದ್ದಂತೆ. ಈ ಬಸ್ಸುಗಳಿಂದಲೇ ನಮ್ಮ ಲಕ್ಷಾಂತರ ಸಾರಿಗೆ ನೌಕರರ ಬದುಕಿನ ರಥವೂ ಸಾಗುತ್ತದೆ ಎಂಬುದನ್ನು ನಮ್ಮ ನೌಕರರು ಅರ್ಥಮಾಡಿಕೊಳ್ಳಬೇಕು. ಹಿಂಸೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಬಸ್ಸುಗಳಿಗೆ ಅಥವಾ ಬಸ್ ನಿಲ್ದಾಣಗಳಿಗೆ ಹಾನಿಗೊಳಿಸಿದರೆ ನಮ್ಮ ನೌಕರರು ತಮ್ಮ ತಲೆಯ ಮೇಲೆ ತಾವೇ ಕಲ್ಲು ಹಾಕಿ ಕೊಂಡಂತಾಗುತ್ತದೆ. ಇಂಥವರ ವಿರುದ್ಧ ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಮುಷ್ಕರದಿಂದಾಗಿ ಬಸ್ಸುಗಳ ಸಂಚಾರ ಸ್ಥಗಿತಗೊಂಡು ಈಗಾಗಲೇ 4 ಸಾರಿಗೆ ನಿಗಮಗಳಿಂದ ಒಟ್ಟು ಬರಬೇಕಾಗಿದ್ದ 152 ಕೋಟಿ ರೂ. ಆದಾಯ ಬರದೇ ನಷ್ಟವಾಗಿದೆ. ಇದರಲ್ಲಿ ಕೆಎಸ್‌ಆರ್ಟಿಸಿ ಗೆ 70 ಕೋಟಿ ರೂ, ಬಿಎಂಟಿಸಿಗೆ 20 ಕೋಟಿ ರೂ, ಈಶಾನ್ಯ ಸಾರಿಗೆ ನಿಗಮಕ್ಕೆ 31.5 ಕೋಟಿ ರೂ, ವಾಯುವ್ಯ ಸಾರಿಗೆ ನಿಗಮಕ್ಕೆ 30.5 ಕೋಟಿ ರೂ. ನಷ್ಟು ಆದಾಯಗಳಿಗೆ ಹೊಡೆತ ಬಿದ್ದಿದೆ.

ಈಗಾಗಲೇ ಅನೇಕ ನೌಕರ ಕುಟುಂಬದವರು ತಾವು ಮುಷ್ಕರದಿಂದ ಬೇಸತ್ತಿರುವದಾಗಿ ತಿಳಿಸಿದರೂ ಸಹ ಕೆಲವು ಪಟ್ಟಭದ್ರರು ಈ ಮುಷ್ಕರವನ್ನು ಮುಂದುವರಿಸುತ್ತಾ ಸಾರ್ವಜನಿಕರಿಗೆ ಅಷ್ಟೇ ಅಲ್ಲ ನಮ್ಮ ನೌಕರ ಬಾಂಧವರಿಗೂ ಕೂಡ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಇಂಥವರ ಕುಮ್ಮಕ್ಕಿಗೆ ಬಲಿಯಾಗಬಾರದು ಎಂದು ನಾನು ಮತ್ತೊಮ್ಮೆ ನಮ್ಮ ನೌಕರ ವರ್ಗದವರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಇಂದು ನಮ್ಮ ಕರೆಗೆ ಓಗೊಟ್ಟು ಹಲವಾರು ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಿರುವುದರಿಂದ ಹಲವು ಕಡೆಗಳಲ್ಲಿ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಯಿತು. ಇಂದು ಸಂಜೆಯ ವೇಳೆಗೆ 3200 ಗಿಂತಲೂ ಹೆಚ್ಚು ಬಸ್ಸುಗಳು ಸಂಚರಿಸಿದವು. ಹೀಗೆ ಕರ್ತವ್ಯಕ್ಕೆ ಆಗಮಿಸಿದ ನಮ್ಮ ನೌಕರ ಮಿತ್ರರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು ಹಾಗೂ ಹಬ್ಬದ ಸಿಹಿಯನ್ನು ವಿತರಿಸಿ ಶುಭಾಶಯ ಕೋರಲಾಯಿತು. ಈಗಲೂ ನಮ್ಮ ಕುಟುಂಬದ ಸದಸ್ಯರಂತೆ ಇರುವ ನೌಕರ ಮಿತ್ರರ ಮೇಲೆ ನಾನು ವಿಶ್ವಾಸ ಕಳೆದುಕೊಂಡಿಲ್ಲ. ನಮ್ಮ ಸಾರಿಗೆ ನೌಕರ ಬಾಂಧವರು ವಾಸ್ತವ ಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಕೂಡಲೇ ಎಲ್ಲರೂ ಕೆಲಸಕ್ಕೆ ಹಾಜರಾಗುತ್ತಾರೆ ಎಂದು ನಾನು ಆಶಾವಾದಿಯಾಗಿದ್ದೇನೆ ಎಂದು ಉಪ ಮುಖ್ಯಮಂತ್ರಿಗಳು ಆದ ಸವದಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ