ಬೆಂಗಳೂರು, ಏಪ್ರಿಲ್ 14: 6ನೇ ವೇತನ ಶಿಫಾರಸ್ಸು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಅದು ಇದೀಗ 8ನೇ ದಿನಕ್ಕೆ ಕಾಲಿಟ್ಟಿದೆ.
ನಮ್ಮ ಬೇಡಿಕೆಗಳು ಈಡೇರಿಕೆ ಆಗುವವರೆಗೂ ಮುಷ್ಕರ ನಿಲ್ಲುವುದಿಲ್ಲ ಎಂದು ಸಾರಿಗೆ ನೌಕರರರು ಪಟ್ಟು ಹಿಡಿದಿದ್ದು, ಇತ್ತ ಸಿಎಂ ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ ಇನ್ನು ಒಂದು ತಿಂಗಳು ಮುಷ್ಕರ ಮಾಡಿದರೂ ಡೋಂಟ್ ಕೇರ್ ಎನ್ನುವಂತೆ ಇದ್ದಾರೆ.
ಸಾರಿಗೆ ನೌಕರರ ಮುಷ್ಕರವನ್ನು ನಿರ್ಲಕ್ಷಿಸಿರುವ ರಾಜ್ಯ ಸರ್ಕಾರ, ಪ್ರಯಾಣಿಕರಿಗಾಗಿ ಈಗಾಗಲೇ ಖಾಸಗಿ ವಾಹನಗಳನ್ನು ಓಡಿಸುತ್ತಿದೆ. ಹೀಗಾಗಿ ಸಾರಿಗೆ ನೌಕರರು ತಮ್ಮ ಕುಟುಂಬದ ಸದಸ್ಯರನ್ನು ಪ್ರತಿಭಟನೆಗೆ ಕರೆತರುವ ಮೂಲಕ ದಿನೇ ದಿನೇ ವಿನೂತನ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ಬುಧವಾರ ಕೂಡ ರಾಜ್ಯದಲ್ಲಿ ಖಾಸಗಿ ಬಸ್ಸುಗಳ ದರ್ಬಾರ್ ಮುಂದುವರೆದಿದ್ದು, ಖಾಸಗಿ ಬಸ್ ಇದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ಬಸ್ಸುಗಳು ಬುಧವಾರ ಸಹ ರಸ್ತೆಗಿಳಿಯುವುದಿಲ್ಲ.
ದಿನದಿಂದ ದಿನಕ್ಕೆ ಸಾರಿಗೆ ನೌಕರರು ಕಳೆದ ಎರಡು ದಿನಗಳಿಂದ ಮುಷ್ಕರವನ್ನು ಚಳವಳಿ ರೂಪದಲ್ಲಿ ಮುಂದುವರೆಸುತ್ತಿದ್ದಾರೆ. ಬುಧವಾರದಿಂದ ರಾಜ್ಯಾದ್ಯಂತ ಸಾರಿಗೆ ನೌಕರರಿಂದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಹಾಗೂ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.
Laxmi News 24×7