ಬೆಂಗಳೂರು, ಎ. 11: ಉತ್ತರ ಕರ್ನಾಟಕದ ಜನತೆಯ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಪ್ರಮುಖ ಇಲಾಖೆಯ ಕಚೇರಿಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಬೇಕು. ಈ ಕುರಿತಂತೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ರೈತರ ಅಭಿವೃದ್ದಿ ಸಂಘದ ಅಧ್ಯಕ್ಷ ಯಾಸೀರ್ ಜವಳಿ, ನ್ಯಾಯವಾದಿ ಶೇಖ್ ಸೌದ್ ತಿಳಿಸಿದ್ದಾರೆ.
ರವಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿಯೇ ರಾಜ್ಯ ಸರಕಾರ ಗೆಜೆಟ್ ಹೊರಡಿಸಿ ಅನೇಕ ಪ್ರಮುಖ ಇಲಾಖೆ ಕಚೇರಿಗಳನ್ನು ಉತ್ತರ ಕರ್ನಾಟಕದ ಭಾಗಗಳಿಗೆ ಸ್ಥಳಾಂತರಿಬೇಕು ಎಂದು ಅಧಿಸೂಚನೆ ಹೊರಡಿಸಿದೆ, ಆದರೆ, ಈ ಅಧಿಸೂಚನೆ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ಕಚೇರಿಗಳ ಸ್ಥಳಾಂತರಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.
ಕೆಲವೊಂದು ಕಚೇರಿಗಳು ಸ್ಥಳಾಂತರಗೊಂಡಿದ್ದರೂ ಅದು ನಾಮಕವಾಸ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಉತ್ತರ ಕರ್ನಾಟಕದ ಭಾಗದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಮೊದಲಾದ ಜಿಲ್ಲೆಗಳು ದಕ್ಷಿಣ ಭಾಗದ ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ ಅಭಿವೃದ್ಧಿಯಿಂದ ವಂಚಿತವಾಗಿವೆ ಎಂದು ದೂರಿದರು.
ಅನೇಕ ಕಚೇರಿಗಳು ಬೆಂಗಳೂರಿನಲ್ಲಿಯೇ ಕೇಂದ್ರಿಕೃತವಾಗಿವೆ, ಉತ್ತರ ಕರ್ನಾಟಕ ಭಾಗದ ಜನತೆ ಕಚೇರಿ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿದೆ. ಈ ವಿಚಾರವಾಗಿ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳಲಾಗಿತ್ತು, ಅನೇಕ ಹಿರಿಯ ಹೋರಾಟಗಾರರು, ಮಠಾಧೀಶರು, ಸಲಹೆ ನೀಡಿದ ಹಿನ್ನಲೆಯಲ್ಲಿ ಕಾನೂನಾತ್ಮಕ ಹೋರಾಟ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
Laxmi News 24×7