Breaking News

ಪಾರ್ಶ್ವವಾಯುಗೆ ತುತ್ತಾಗಿದ್ದ ವಿದ್ಯಾರ್ಥಿನಿಗೆ ಚಿನ್ನದ ಪದಕ

Spread the love

ದಾವಣಗೆರೆ: ಬ್ರೈನ್‌ ಸ್ಟ್ರೋಕ್‌ (ಮೆದುಳಿನ ಪಾರ್ಶ್ವವಾಯು) ಆಗಿದ್ದ ವಿದ್ಯಾರ್ಥಿನಿ ಹಾಸಿಗೆಯಲ್ಲಿ ಮಲಗಿದ್ದರೂ ಛಲ ಬಿಡದೇ ಓದಿ ಸ್ನಾತಕೋತ್ತರ ಪದವಿಯಲ್ಲಿ (ಇಂಗ್ಲಿಷ್‌) ಚಿನ್ನದ ಪದಕ ಪಡೆದಿದ್ದಾರೆ.

ದಾವಣಗೆರೆ ವಿದ್ಯಾನಗರದ ನಿಸರ್ಗ ಕೆ.ಪಿ. ಈ ಸಾಧಕ ವಿದ್ಯಾರ್ಥಿನಿ. ಸಿವಿಲ್‌ ಕಂಟ್ರಾಕ್ಟರ್‌ ಪಂಚಾಕ್ಷರಿ-ಬಸಮ್ಮ ದಂಪತಿಯ ಮಗಳಾಗಿರುವ ನಿಸರ್ಗ ಅವರಿಗೆ 2020ರ ಏಪ್ರಿಲ್‌ನಲ್ಲಿ ಬ್ರೈನ್‌ ಸ್ಟ್ರೋಕ್‌ ಆಗಿತ್ತು. ಶಿವಮೊಗ್ಗದ ಮಾನಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಕಾರಣದಿಂದ ತಡವಾಗಿ ಅಂದರೆ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ಘೋಷಣೆಯಾಗಿತ್ತು. ಬೆಡ್‌ನಲ್ಲಿ ಮಲಗಿಕೊಂಡೇ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ ಅಧ್ಯಯನ ಮಾಡಿದ್ದರು.

ಅವರಿಗೆ ಮೂರು ವರ್ಷ ಚಿಕಿತ್ಸೆ ಅಗತ್ಯವಿದೆ. ಈ ಮಧ್ಯೆ ಪರೀಕ್ಷೆ ಬರೆದು ಹೋಗಿದ್ದರು. ಇದೀಗ ಮೂರು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಗುರುವಾರ ನಡೆದ ಘಟಿಕೋತ್ಸವದಲ್ಲಿ ಈ ಪದಕಗಳನ್ನು ಸ್ವೀಕರಿಸಿದರು.

‘ಮಾನಸ ಆಸ್ಪತ್ರೆಯ ಡಾ.ಅವಿನಾಶ್‌ ಮತ್ತು ಡಾ. ವಾಮನ ಪೈ ಅವರಿಂದಾಗಿ ನಾನು ಬದುಕಿ ಉಳಿದಿದ್ದೇನೆ. ನನ್ನ ಅಪ್ಪ ಅಮ್ಮ, ಬಿಬಿಎಂ ಮಾಡುತ್ತಿರುವ ತಮ್ಮ ಕೊಟ್ರೇಶ್‌ ಬೆಂಬಲವಾಗಿ ನಿಂತರು. ಕಾಲೇಜಿನಲ್ಲೂ ಪ್ರೋತ್ಸಾಹಿಸಿದರು’ ಎಂದು ನಿಸರ್ಗ ನೆನಪು ಮಾಡಿಕೊಂಡರು.

‘ನನಗೆ ಬಾಲ್ಯದಿಂದಲೂ ಇಂಗ್ಲಿಷ್‌ ಇಷ್ಟ. ಇಂಗ್ಲಿಷ್‌ ಸಾಹಿತ್ಯ, ಕವಿತೆಗಳು, ಲೇಖಕರು ಅಂದರೆ ಇಷ್ಟ. ಹಾಗಾಗಿ ಇಂಗ್ಲಿಷ್‌ನಲ್ಲಿ ಎಂ.ಎ. ಮಾಡಿದ್ದೇನೆ. ಮುಂದೆ ನನ್ನದೇ ಆದ ಶಾಲೆಯನ್ನು ತೆರೆಯಬೇಕೆಂದುಕೊಂಡಿದ್ದೇನೆ. ನಗರದ ವಿದ್ಯಾರ್ಥಿಗಳಿಗೆ
ಸಿಕ್ಕಿದಷ್ಟೇ ಗುಣಮಟ್ಟದ ಶಿಕ್ಷಣವನ್ನು ಹಳ್ಳಿಯ ಮಕ್ಕಳಿಗೆ ನೀಡಬೇಕು. ಸಮಾಜ ಸೇವೆ ಮಾಡಬೇಕು ಎಂಬ ಕನಸುಗಳು ಇವೆ’ ಎಂದು ವಿವರಿಸಿದರು.

‘ಮಗಳ ಕನಸು ನನಸಾಗಿಸಲು ಯತ್ನ’

‘ಕಳೆದ ವರ್ಷ ಏಪ್ರಿಲ್‌ 14ರಂದು ಮಗಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಪರೀಕ್ಷೆ ಸಮಯದಲ್ಲಿಯೂ ಅಷ್ಟೊಂದು ಚೇತರಿಸಿಕೊಂಡಿರಲಿಲ್ಲ. ಈ ನೋವಿನ ಮಧ್ಯೆಯೂ ಸಾಧನೆ ಮಾಡಿರುವುದು ಭಗವಂತನ ಕೃಪೆ ಎಂದು ಭಾವಿಸುತ್ತೇನೆ. ಡೊನೇಶನ್‌ ಕಟ್ಟಲು ಸಾಧ್ಯವಾಗದ ಅನೇಕ ಬಡವರು ಇದ್ದಾರೆ. ಅವರಿಗಾಗಿ ಶಾಲೆ ತೆರೆಯಬೇಕು ಎಂಬ ಅವಳ ಆಸೆ ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದು ನಿಸರ್ಗ ಅವರ ತಂದೆ ಪಂಚಾಕ್ಷರಿತಿಳಿಸಿದರು.


Spread the love

About Laxminews 24x7

Check Also

ದಾವಣಗೆರೆ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಗಳಿಗಿಲ್ಲ ಉದ್ಘಾಟನೆ ‘ಭಾಗ್ಯ’

Spread the love ದಾವಣಗೆರೆ: ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಹಿಳೆಯರ ಮತ್ತು ಮಕ್ಕಳ ವಿಭಾಗ ಹಾಗೂ ತುರ್ತು ಚಿಕಿತ್ಸಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ