ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವುದರಿಂದ ಸರ್ಕಾರ ಎಂಟು ಜಿಲ್ಲೆಗಳ ಚಿತ್ರ ಮಂದಿರಗಳಲ್ಲಿ ಶೇ 50ರಷ್ಟು ಸೀಟು ಭರ್ತಿಗಷ್ಟೇ ಅವಕಾಶ ನೀಡಿದೆ. ಈ ಮೂಲಕ ಮತ್ತೆ ಸಿನಿಮಾ ಮಂದಿಯಲ್ಲಿ ಆತಂಕ ಮೂಡಿದೆ. ಕೊರೊನಾ ತಡೆಯಲು ಹೊಸ ಮಾರ್ಗಸೂಚಿಯನ್ನು ಪಾಲಿಸುವ, ಒಪ್ಪಿಕೊಳ್ಳುವ ಅನಿವಾರ್ಯತೆ ಒಂದು ಕಡೆಯಾದರೆ, ತಮ್ಮ ಚಿತ್ರಗಳ ಬಿಡುಗಡೆಯಲ್ಲಿ ವ್ಯತ್ಯಯ ಆಗುತ್ತದೆ ಎಂಬ ಕಳವಳ ಮತ್ತೂಂದು ಕಡೆ.
ಸರ್ಕಾರ ಸದ್ಯ ಹೊರಡಿಸಿರುವ ಮಾರ್ಗಸೂಚಿ ಏ.20ರವರೆಗೆ ಅನ್ವಯವಾಗಲಿದೆ. ಅದೇನೇ ಆದರೂ ಶೇ 50ಕ್ಕೆ ಇಳಿಸಿರುವ ಸರ್ಕಾರದ ಈ ನಿರ್ಧಾರ ಚಿತ್ರರಂಗದ ಮೇಲೆ ಪರಿಣಾಮ ಬೀರುವುದಂತೂ ಸುಳ್ಳಲ್ಲ.
ಏಕೆಂದರೆ ಪುನೀತ್ ರಾಜ್ ಕುಮಾರ್ ಅವರ “ಯುವರತ್ನ’ ಚಿತ್ರ ಏ.01ರಂದು ತೆರೆಕಂಡು ಭರ್ಜರಿ ಓಪನಿಂಗ್ ಪಡೆದಿದೆ. ವೀಕೆಂಡ್ ನಲ್ಲಿ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆ ಇತ್ತು. ಜೊತೆಗೆ ಮುಂಗಡ ಬುಕಿಂಗ್ ಕೂಡಾ ಆಗಿತ್ತು. ಆದರೆ, ಸರ್ಕಾರದ ಹೊಸ ಮಾರ್ಗಸೂಚಿ “ಯುವರತ್ನ’ ಚಿತ್ರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ಇದೇ ಕಾರಣದಿಂದ ಪುನೀತ್ ರಾಜ್‌ಕುಮಾರ್, ಸರ್ಕಾರ ತನ್ನ ನಿರ್ಧಾರವನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.
ಶೇ 50 ಸೀಟು ಭರ್ತಿ ನಿರ್ಧಾರ ಹೊಸಬರ ಮೇಲೂ ಪರಿಣಾಮ ಬೀರಲಿದೆ. ಏಕೆಂದರೆ “ಯುವರತ್ನ’ ಬಿಟ್ಟರೆ ಏಪ್ರಿಲ್ 29ರವರೆಗೆ ಯಾವುದೇ ದೊಡ್ಡ ಸ್ಟಾರ್‌ಗಳ ಸಿನಿಮಾ ಇರಲಿಲ್ಲ. ಹಾಗಾಗಿ, ಆ ಗ್ಯಾಪ್ ನಲ್ಲಿ ಹೊಸಬರು ಹಾಗೂ ಇತರ ನಟರ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದವು. ಆದರೆ, ಈಗ ಸರ್ಕಾರದ ನಿರ್ಧಾರದಿಂದ ಸಿನಿಮಾ ಬಿಡುಗಡೆಯಲ್ಲಿ ವ್ಯತ್ಯಯವಾಗಲಿದೆ. ಈಗ ಬಿಡುಗಡೆಯಾಗಬೇಕಾಗಿದ್ದ ಚಿತ್ರಗಳು ಮತ್ತೆ ಮುಂದಕ್ಕೆ ಹೋಗಿ, ಮತ್ತೆ ಗೊಂದಲವಾಗುತ್ತದೆ
ಎಂಬ ಆತಂಕ ಚಿತ್ರರಂಗಕ್ಕೆ ಕಾಡುತ್ತಿದೆ. ಈಗಾಗಲೇ “ರಿವೈಂಡ್’, “ಗೋವಿಂದ ಗೋವಿಂದ’,”ಕೃಷ್ಣ ಟಾಕೀಸ್’, “ಕೊಡೆ ಮುರುಗ’ ಸೇರಿ ದಂತೆ ಅನೇಕ ಚಿತ್ರಗಳು ತಮ್ಮ ಬಿಡುಗಡೆ ಯನ್ನು ಘೋಷಿಸಿಕೊಂಡಿವೆ.
ಚಿತ್ರ ಮಂದಿರಗಳು ಈಗಷ್ಟೇ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಇಂತಹ ಹೊತ್ತಲ್ಲಿ ಸರ್ಕಾರದ ಈ ನಿರ್ಧಾರ ಚಿತ್ರ ಮಂದಿರ ಮಾಲಕರಿಗೂ ಬೇಸರ ತರಿಸಿದೆ. ಈಗಷ್ಟೇ ಚೇತರಿಕೆ ಕಾಣುತ್ತಿರುವ ಚಿತ್ರರಂಗಕ್ಕೆ ಶೇ 50 ಸೀಟು ಭರ್ತಿ ನಿರ್ಧಾರ ಬ್ರೇಕ್ ಹಾಕಿದಂತಾಗಿದೆ.
ಕಾದು ನೋಡುವ ನಿರ್ಧಾರ
ಈಗಷ್ಟೇ ಚಿತ್ರರಂಗ ಸ್ವಲ್ಪ ಚೇತರಿಕೆ ಪಡೆದುಕೊಳ್ಳುತ್ತಿತ್ತು. ಇಂಥ ಸಂದರ್ಭದಲ್ಲಿ ಮತ್ತೆ ಸರ್ಕಾರ ಥಿಯೇಟರ್‌ಗಳಲ್ಲಿ 50% ಪ್ರವೇಶಕ್ಕೆ ನಿಯಂತ್ರಣ ಹೇರಿದೆ. ಹೀಗೆ ಮುಂದುವರೆದರೆ, ಇಡೀ ಇಂಡಸ್ಟ್ರಿ ನಾಶವಾಗಿ ಹೋಗುತ್ತದೆ. ಕೋವಿಡ್ ಪರಿಸ್ಥಿತಿ ಎಂದು ಹೇಳಿ ಸರ್ಕಾರ ಇಂಥ ನಿರ್ಧಾರ ಕೈಗೊಂಡಿರುವುದರಿಂದ, ನಾವು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಗುವುದಿಲ್ಲ. ನಿಜ ವಾಗಿಯೂ ಇದರಿಂದ ಥಿಯೇಟರ್‌ನವರಿಗೆ, ನಿರ್ಮಾಪಕರಿಗೆ, ವಿತರಕರಿಗೆ ಎಲ್ಲರಿಗೂ ತೊಂದರೆ ಯಾಗುತ್ತಿದೆ. ಒಂದೆರಡು ದಿನ ಕಾದು ನೋಡಿ ಬಳಿಕ ಮುಖ್ಯಮಂತ್ರಿಗಳನ್ನು ಮತ್ತು ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡುತ್ತೇವೆ.
ಜೈರಾಜ್,ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ
ಥಿಯೇಟರ್ ಮುಚ್ಚೋದು ಒಳ್ಳೇದು
ಜನರು ಯಾವುದೇ ನಿರ್ಬಂಧವಿಲ್ಲದೆ ಎಲ್ಲ ಕಡೆ ಓಡಾಡುತ್ತಿದ್ದಾರೆ. ಬಸ್ಸು, ಆಟೋ, ರೈಲು, ಮಾರ್ಕೇಟ್ ಎಲ್ಲ ಕಡೆ ಜನ ಸಂಚಾರವಿದೆ. ಹೀಗಿರುವಾಗ, ಥಿಯೇಟರ್‌ನಲ್ಲಿ ಮಾತ್ರ 50% ಪ್ರವೇಶಾತಿ ಇರಬೇಕು ಎಂದು ಹೇಳುತ್ತಿರುವ ಸರ್ಕಾರದ ತರ್ಕವೇ ಅರ್ಥವಾಗುತ್ತಿಲ್ಲ. ಇಲ್ಲಿಯವರೆಗೆ ಯಾವುದೇ ಥಿಯೇಟರ್‌ನಿಂದ ಕೊರೋನಾ ಬಂದಿದೆ ಅನ್ನೋ ಒಂದೇ ಒಂದು ನಿದರ್ಶನ ಕೂಡ ಇಲ್ಲ. ಕಳೆದ ಒಂದು ವರ್ಷದಿಂದ ಥಿಯೇಟರ್ ಮಾಲೀಕರು, ಅದರ ಕಾರ್ಮಿಕರು, ಅವರ ಕುಟುಂಬ ಎಲ್ಲ ಕೊರೊನಾದಿಂದ ಹೈರಾಣಾಗಿದ್ದಾರೆ. ಅನೇಕ ಬಾರಿ ಮನವಿ ಮಾಡಿದರೂ, ಸರ್ಕಾರದಿಂದ ಸಿಗಬೇಕಾದ ಸಹಕಾರ – ಸಹಾಯ ಇನ್ನೂ ಸಿಕ್ಕಿಲ್ಲ. ಈಗಷ್ಟೇ ಸಿನಿಮಾಗಳು ರಿಲೀಸ್ ಆಗಿ ಜನ ಥಿಯೇಟರ್ ಕಡೆಗೆ ಬರುತ್ತಿದ್ದಾರೆ. ಇಂಡಸ್ಟ್ರಿಯಿಂದ ಸ್ವಲ್ಪ ತಲೆ ಎತ್ತುತ್ತಿದ್ದೇವೆ ಎನ್ನುವಾಗಲೇ, ಮತ್ತೆ ಸರ್ಕಾರ ನಮ್ಮ ಮೇಲೆ ಬರೆ ಎಳೆಯಲು ಹೊರಟಿದೆ. 50%ರಷ್ಟು ಪ್ರವೇಶಕ್ಕೆ ಅವಕಾಶ ಕೊಟ್ಟರೂ, ಥಿಯೇಟರ್‌ಗಳನ್ನು ನಡೆಸುವ ಖರ್ಚು ಕಡಿಮೆಯಾಗುವುದಿಲ್ಲ. 50% ಕೊಡುವ ಬದಲು ಕಂಪ್ಲೀಟ್ ಥಿಯೇಟರ್‌ಗಳನ್ನೇ ಮುಚ್ಚುವಂತೆ ಹೇಳುವುದೇ ಒಳ್ಳೆಯದು.
ಕೆ.ವಿ ಚಂದ್ರಶೇಖರ್, ಪ್ರದರ್ಶಕರ ಸಂಘದ ಅಧ್ಯಕ
ನಿರ್ಮಾಪಕರ ಗತಿ ಏನಾಗಬೇಕು?
ಸರ್ಕಾರ ಯಾವುದೇ ಮುನ್ಸೂಚನೆ ಕೊಡದೇ ಈ ರೀತಿ ಏಕಾಏಕಿ ನಿರ್ಧಾರ ಪ್ರಕಟಿಸಿರುವುದು ಸರಿಯಲ್ಲ. ಕೋಟಿಗಟ್ಟಲೇ ಬಂಡವಾಳ ಹಾಕಿ ಸಿನಿಮಾ ಮಾಡಿರುವ ನಿರ್ಮಾಪರು ಏನಾಗಬೇಕು. ಮೊದಲೇ ಹೇಳಿದ್ದರೆ ಅವರು ಸಿನಿಮಾ ಬಿಡುಗಡೆಯನ್ನಾದರೂ ಮುಂದಕ್ಕೆ ಹಾಕುತ್ತಿದ್ದರು. ಆದರೆ, ಈಗ ಬಿಡುಗಡೆಯಾದ ಬೆನ್ನಲ್ಲೇ ಈ ನಿರ್ಧಾರ ಸರಿಯಲ್ಲ.
ಸೂರಪ್ಪ ಬಾಬು, ನಿರ್ಮಾಪಕ