ಬೆಂಗಳೂರು: 2019ರಲ್ಲಿ ಅಕ್ರಮವಾಗಿದ್ದರೆ ಆಗ ನೀವು ಮಂಗಳ ಗ್ರಹದಲ್ಲಿ ಇದ್ರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಆರ್ ಅಶೋಕ್‍ಗೆ ಮರು ಪ್ರಶ್ನೆ ಹಾಕಿದ್ದಾರೆ.
ಬಿಜೆಪಿ ಸರ್ಕಾರ 2 ಸಾವಿರ ಕೋಟಿ ರೂ. ಅಕ್ರಮ ಎಸಗಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ಭಾರೀ ಚರ್ಚೆಗೀಡಾಗಿದೆ. ಮಾಜಿ ಸಿಎಂ ಆರೋಪಕ್ಕೆ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿ, 2019ರಲ್ಲಿ ಚಂದ್ರಲೋಕದಿಂದ ವೆಂಟಿಲೇಟರ್ ಬಂದಿತ್ತಾ ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದರು.
ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 2019ರ ವೆಂಟಿಲೇಟರ್ ಖರೀದಿಯಲ್ಲಿಯೂ ಅಕ್ರಮವಾಗಿದೆ, ಅದೇನು ಚಂದ್ರಲೋಕದಿಂದ ಬಂದಿತ್ತಾ? ಎಂದು ಕೇಳಿದ್ದಿರಲ್ಲಾ ಅಶೋಕ್ ಅವರೇ, ಆಗ ಅಕ್ರಮವಾಗಿದ್ದರೆ ವಿರೋಧ ಪಕ್ಷದಲ್ಲಿದ್ದ ನೀವ್ಯಾಕೆ ಆಗಲೇ ಪ್ರಶ್ನಿಸಿರಲಿಲ್ಲ. ಆ ಕಾಲದಲ್ಲಿ ನೀವು ಮಂಗಳ ಗ್ರಹದಲ್ಲಿ ಇದ್ರಾ ಎಂದು ಮರುಪ್ರಶ್ನೆ ಹಾಕಿದ್ದಾರೆ.
ಕೊರೊನಾ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎನ್ನುವ ವಿಶ್ವಾಸ ನಿಮಗಿದ್ದರೆ ಅಂಜಿಕೆ ಯಾಕೆ? ಆರೋಪಗಳ ತನಿಖೆಯನ್ನು ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರಿಂದ ಮಾಡಿಸಿ. ನಮ್ಮ ದಾಖಲೆಗಳನ್ನು ಅಲ್ಲಿಯೇ ನೀಡುತ್ತೇವೆ ಎಂದು ಸಿದ್ದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಗುರುವಾರ ಕಾಂಗ್ರೆಸ್ಸಿನವರು ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ ಬಳಿಕ ಬಿಜೆಪಿಯವರು ಕೂಡ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿzದ್ದ ಸಚಿವ ಆರ್. ಅಶೋಕ್, 2019ರ ಜನವರಿಯಲ್ಲಿ ಸರ್ಕಾರ 9 ಯೂನಿಟ್ ಖರೀದಿ ವೆಂಟಿಲೇಟರ್ ಖರೀದಿಸಿತ್ತು. ಆ ವೇಳೆ ಒಂದು ವೆಂಟಿಲೇಟರ್‍ಗೆ 14.51 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು. 2019ರ ಜುಲೈನಲ್ಲಿ 28 ಯೂನಿಟ್ ಖರೀದಿಸಿತ್ತು. ಆಗ ಒಂದು ಯೂನಿಟ್‍ಗೆ 15 ಲಕ್ಷ ರೂ. ನೀಡಿತ್ತು. 20119ರ ಜನವರಿಯಲ್ಲಿ 9 ವೆಂಟಿಲೇಟರ್ ಖರೀದಿ ಮಾಡಿತ್ತು. ಈ ವೇಳೆ ಒಂದು ವೆಂಟಿಲೇಟರ್‍ಗೆ 21 ಲಕ್ಷ ರೂ. ನೀಡಿತ್ತು. ಈ ಸಮಯದಲ್ಲಿ ಯಾವುದೇ ತುರ್ತು ಅಗತ್ಯ ಇರಲಿಲ್ಲ. ಆ ವೆಂಟಿಲೇಟರ್‍ಗಳು ಚಂದ್ರಲೋಕದಿಂದ ಬಂದಿರಬಹುದೇನೋ. ನಾವು ಪಾರದರ್ಶಕವಾಗಿ ಖರೀದಿ ಮಾಡಿದ್ದೇವೆ ಎಂದು ಉತ್ತರ ನೀಡಿದ್ದರು