ಮೈಸೂರು: ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಈಗಿರುವ ಶೇ.೪೯ ರಿಂದ ಶೇ.೭೪ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿರುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ವಿರೋಧಿಸಿ ವಿಮಾ ನೌಕರರು ಮತ್ತು ಅಧಿಕಾರಿಗಳ ಜಂಟಿ ವೇದಿಕೆ ಪ್ರತಿಭಟನೆ ನಡೆಸಿದೆ.
ಕೇಂದ್ರ ಸರ್ಕಾರ ಬಜೆಟ್ ಮಂಡನೆ ವೇಳೆ ಪ್ರಸ್ತಾಪವಾಗಿರುವ ವಿದೇಶಿ ನೇರ ಹೂಡಿಕೆ ಮಾರಕವಾದುದು ಎಂದು ಆರೋಪಿಸಿ ಮೈಸೂರು ವಿಭಾಗದ ವಿಮಾ ನೌಕರರು ಮತ್ತು ಅಧಿಕಾರಿಗಳ ಜಂಟಿ ವೇದಿಕೆ ಮುಖಂಡರು ಖಂಡಿಸಿದ್ದಲ್ಲದೆ, ಬನ್ನಿಮಂಟಪದ ಬಳಿ ಇರುವ ಎಲ್‌ಐಸಿ ಕೇಂದ್ರ ಕಚೇರಿ ಹಾಗೂ ನಗರದ ಎಲ್ಲ ಎಲ್‌ಐಸಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಈ ಬಜೆಟ್‌ನಲ್ಲಿ ಎಲ್‌ಐಸಿ ಕಾಯ್ದೆ ೧೯೩೮ಕ್ಕೆ ತಿದ್ದುಪಡಿ ತರುವ ಮೂಲಕ ಎಲ್‌ಐಸಿಯ ಷೇರು ಮಾರಾಟವನ್ನು ಮಾಡಲು ಸರ್ಕಾರ ಮಾಡಿರುವ ಪ್ರಸ್ತಾಪ ಖಂಡನೀಯ. ಇದರಿಂದಾಗಿ ಒಂದು ಸರ್ಕಾರಿ ಸ್ವಾಮ್ಯದ ಸಂಸ್ಥೆ ನಾಶವಾಗಲಿದೆ ಆಕ್ರೋಶ ವ್ಯಕ್ತಪಡಿಸಿದರು.
ಎಲ್‌ಐಸಿ ಒಂದು ಪಾರದರ್ಶಕ ಸಂಸ್ಥೆ. ಕೇಂದ್ರ ಮಾಹಿತಿ ಆಯೋಗ ವಹಿಸಿದ ಪಾರದರ್ಶಕತೆ ಲೆಕ್ಕಪರಿಶೋಧನೆಯಲ್ಲಿ ಎಲ್‌ಐಸಿಗೆ ಗ್ರೇಡ್-೧ ಸ್ಥಾನಮಾನ ಲಭಿಸಿದೆ. ಎಲ್‌ಐಸಿ ಭಾರತೀಯ ಆರ್ಥಿಕತೆಯಲ್ಲಿ ಅತಿದೊಡ್ಡ ಹೂಡಿಕೆದಾರನಾಗಿದೆ. ೨೦೨೦ರ ಆರ್ಥಿಕ ವರ್ಷದಲ್ಲಿ ಎಲ್‌ಐಸಿಯ ಹೂಡಿಕೆ೩೦೬೯೯೨೪ ಕೋಟಿ ರೂ.ಗಳಾಗಿದೆ. ಹೀಗಿದ್ದರೂ ಎಲ್‌ಐಸಿಯನ್ನು ಖಾಸಗೀಕರಣ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಭಾರತ ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಅತ್ಯದ್ಭುತ ಕೊಡುಗೆ ನೀಡುತ್ತಿರುವ ಎಲ್‌ಐಸಿಯನ್ನು ಸಾರ್ವಜನಿಕ ವಲಯದಲ್ಲಿಯೇ ಉಳಿಸಬೇಕು, ವಿದೇಶಿ ನೇರ ಹೂಡಿಕೆ ಮಿತಿ ಹೆಚ್ಚಳದ ಪ್ರಸ್ತಾಪವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಎಲ್‌ಐಸಿ ಮೈಸೂರು ವಿಭಾಗೀಯ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಪವಾರ್, ನಾಗೇಶ್, ರಾಮು, ಲ.ಜಗನ್ನಾಥ್, ನಿರಂಜನಮೂರ್ತಿ, ವೆಂಕಟರಾಮು, ಬಿ.ಜಿ.ಬಾಲಾಜಿ, ಎಸ್.ಕೆ.ರಾಮು, ಮಹಮದ್ ಪಾಷಾ, ರಾಜು, ದಿವ್ಯಾನಂದ, ಯೋಗೀಶ್, ಪುಟ್ಟಸ್ವಾಮಿ, ಮುಂತಾದವರು ಭಾಗವಹಿಸಿದ್ದರು.