ರಾಯಬಾಗ: ವರ್ಗಾವಣೆಗೊಂಡಿರುವ ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರನ್ನು ರಾತ್ರೋ ರಾತ್ರಿ ಸಾಮಗ್ರಿಗಳ ಸಮೇತ ಮನೆ ಖಾಲಿ ಮಾಡಿಸಿದ ಆರೋಪ ಕೇಳಿ ಬಂದಿದೆ.
ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಗೈರಾಣ ಜಾಗ ಸಲುವಾಗಿ ಶಾಸಕ ದುರ್ಯೋಧನ ಐಹೊಳೆ ಹಾಗೂ ತಹಸೀಲ್ದಾರ್ ಚಂದ್ರಕಾಂತ ಅವರ ಮಧ್ಯೆ ಕಿತ್ತಾಟ ನಡೆದಿತ್ತು. ಶಾಸಕ ಐಹೊಳೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ತಹಸೀಲ್ದಾರ್ ಅವರ ವರ್ಗಾವಣೆ ಮಾಡಿಸಿದ್ದರು.
ದಿಢೀರ್ ವರ್ಗಾವಣೆ ವಿರೋಧಿಸಿ ತಹಸೀಲ್ದಾರ್ ಕೆಇಟಿಯಲ್ಲಿ ಅರ್ಜಿ ಸಲ್ಲಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಂಗಿದ್ದರು. ಆದ್ರೆ ಶಾಸಕ ಐಹೊಳೆ ವಸತಿ ಶಾಲೆ ಖಾಲಿ ಮಾಡುವಂತೆ ಆದೇಶಿಸಿದ್ದಾರೆ. ಅದರಂತೆ ಚಂದ್ರಕಾಂತ ಭಜಂತ್ರಿ ಅವರನ್ನ ಸಮಾಜ ಕಲ್ಯಾಣ ಅಧಿಕಾರಿಗಳು ಮನೆಯನ್ನು ಖಾಲಿ ಮಾಡಿಸಿದ್ದಾರೆ.
ಶಾಸಕ ದುರ್ಯೋಧನ ಐಹೊಳೆ ಕಿರುಕುಳ ನೀಡುತ್ತಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಮನೆ ಖಾಲಿ ಮಾಡಿಸಿದ್ದಾರೆ. ಅಲ್ಲದೇ ಪಟ್ಟಣದಲ್ಲಿ ಖಾಸಗಿ ಮನೆ ಬಾಡಿಗೆ ನೀಡದಂತೆ ಮನೆ ಮಾಲೀಕರಿಗೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ನನಗೆ ಇಲ್ಲಿ ಯಾವ ಮನೆಯೂ ಸಿಕ್ಕಿಲ್ಲ. ಈಗ ಮುಂದೆ ಏನ್ ಮಾಡಬೇಕು ಎಂದು ತಮಗೆ ತೋಚುತ್ತಿಲ್ಲ. ಈ ಬಗ್ಗೆ ನಾನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನನ್ನನ್ನು ವರ್ಗಾವಣೆ ಅಷ್ಟೇ ಮಾಡಿದ್ದಾರೆ. ಕೆಇಟಿಯಲ್ಲಿ ಪ್ರಕರಣ ಬಾಕಿ ಇದೆ. ಅದರ ಆದೇಶ ಬರುವವರೆಗೂ ಕಾಯಬೇಕಿದೆ ಎಂದು ತಹಸೀಲ್ದಾರ್ ಪ್ರತಿಕ್ರಿಯೆ ನೀಡಿದ್ದಾರೆ.