Breaking News

ಈ ಸಾಲಿನ ಬಜೆಟ್ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ: ಸಿದ್ದರಾಮಯ್ಯ

Spread the love

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ಮಾರಕವಾಗಿದೆ. ಕಾರಣ ಈ ಸಾಲಿನಲ್ಲಿ ರಾಜಸ್ವ ಆದಾಯಕ್ಕಿಂತ ರಾಜಸ್ವ ಖರ್ಚು ಹೆಚ್ಚಾಗುವ ಮೂಲಕ ಮೊದಲನೇ ಬಾರಿಗೆ ರಾಜಸ್ವ ಖೋತಾ‌ ಅಥವಾ ರಾಜಸ್ವ ಕೊರತೆ ಉಂಟಾಗಿದೆ. 2004 ರ ನಂತರ ವಿತ್ತೀಯ ಹೊಣೆಗಾರಿಕೆ ನೀತಿಯನ್ನು ಕರ್ನಾಟಕ ಅಳವಡಿಸಿಕೊಂಡ ನಂತರದಲ್ಲಿ ಇಂಥದ್ದೊಂದು ರಾಜಸ್ವ ಕೊರತೆಯ ಬಜೆಟ್‌ ಈ ವರೆಗೆ ಮಂಡನೆಯಾಗಿರಲಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿತ್ತೀಯ ಹೊಣೆಗಾರಿಕೆ ನೀತಿಯ ಅನ್ವಯ ವಿತ್ತೀಯ ಕೊರತೆ ಶೇ.3ಕ್ಕಿಂತ ಕಡಿಮೆ ಇರಬೇಕು, ರಾಜಸ್ವ ಉಳಿಕೆ ಇರಬೇಕು ಹಾಗೂ ರಾಜ್ಯದ ಸಾಲ ಜೆ.ಎಸ್.ಡಿ.ಪಿ ಯ ಶೇ. 25 ಗಿಂತ ಕಡಿಮೆ ಇರಬೇಕು. ನನ್ನ 5 ವರ್ಷಗಳ ಆಡಳಿತದಲ್ಲಿ ಯಾವತ್ತೂ ಕೂಡ ಈ ನಿಯಮ ಉಲ್ಲಂಘನೆಯಾಗಿಲ್ಲ ಎಂದರು.

2019-20 ರಲ್ಲಿ ಕರ್ನಾಟಕ ರೂ.1185 ಕೋಟಿ ರಾಜಸ್ವ ಉಳಿಕೆ ಹೊಂದಿತ್ತು. 2020-21 ನೇ ಸಾಲಿನಲ್ಲಿ ರೂ.143 ಕೋಟಿ ರಾಜಸ್ವ ಉಳಿಕೆ ಆಗಬಹುದೆಂಬ ಅಂದಾಜು ಮಾಡಲಾಗಿತ್ತು, ಈಗ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ರಾಜಸ್ವ ಉಳಿಕೆಯ ಬದಲಿಗೆ ರೂ.19,485 ಕೋಟಿ ರಾಜಸ್ವ ಕೊರತೆ ಉಂಟಾಗಿದೆ. ಇಷ್ಟೇ ಅಲ್ಲದೆ 2021-22 ನೇ ಸಾಲಿನಲ್ಲಿ ರೂ.15,133 ಕೋಟಿ ರಾಜಸ್ವ ಕೊರತೆ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರ ಸಾಲ ಮಾಡಿ ರಾಜಸ್ವ ಖರ್ಚುಗಳಿಗೆ ಬಳಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇಂದು ಎದುರಾಗಿದೆ. ಸರ್ಕಾರ ಈ ವರ್ಷದ ಜನವರಿ ವರೆಗೆ ರೂ.70,000 ಕೋಟಿ ಸಾಲ ಮಾಡಿದೆ. ಇದು ರಾಜ್ಯದ ಜಿ.ಎಸ್.ಡಿ.ಪಿ ಯ 26.90% ಆಗಿದೆ. ಈ ಬಾರಿ ಕೇಂದ್ರ ರಾಜ್ಯಗಳಿಗೆ ಜಿ.ಎಸ್.ಡಿ.ಪಿ ಯ 25% ಮೇಲೆ 2% ಹೆಚ್ಚುವರಿಯಾಗಿ ಸಾಲ ಪಡೆಯಲು ಅನುಮತಿ ನೀಡುತ್ತೇವೆ ಎಂದು ಹೇಳಿದೆ. ಹೀಗೆ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಸಾಲ ಮಾಡುತ್ತಾ ಹೋದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಪ್ರಸಕ್ತ ಬಜೆಟ್‌ ನಲ್ಲಿ ಈ ಸಾಲಿನಲ್ಲಿ ರೂ.71,000 ಕೋಟಿ ಸಾಲ ಮಾಡುವುದಾಗಿ ಸರ್ಕಾರ ಹೇಳಿದೆ. ರಾಜ್ಯದ ಬದ್ಧತಾ ಖರ್ಚು ಈ ವರ್ಷ 92% ತಲುಪಿದೆ, ಇದು ಮುಂದಿನ ಸಾಲಿನಲ್ಲಿ ಶೇ.102ರಷ್ಟು ಆಗಲಿದೆ. ಅಂದರೆ ಸರ್ಕಾರ ಸಾಲ ಮಾಡಿದ ಹಣದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಹಣ ನೀಡಬೇಕಾಗುತ್ತದೆ. ಇದರಿಂದ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಳ್ಳಲಿವೆ.
ಸರ್ಕಾರ ತನ್ನೆಲ್ಲಾ ಕಷ್ಟ ನಷ್ಟಗಳಿಗೆ, ಲೋಪದೋಷಗಳಿಗೆ ಕೊರೋನಾವನ್ನು ಹೊಣೆ ಮಾಡುತ್ತಿದೆ. ಕೊರೋನಾ ವ್ಯಾಪಕವಾಗಿ ಹರಡಿದ ಪರಿಣಾಮದಿಂದ ಲಾಕ್‌ ಡೌನ್‌ ಘೋಷಣೆ ಮಾಡಲಾಯಿತು. ಇದರಿಂದ ಜನ ಉದ್ಯೋಗವಿಲ್ಲದೆ ಮನೆಯಲ್ಲೇ ಕೂರುವಂತಾಗಿ, ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲವಾಯಿತು. ಈ ವೇಳೆ ಸರ್ಕಾರ ರಾಜ್ಯದ 1 ಕೋಟಿ ಕುಟುಂಬಗಳಿಗೆ ತಲಾ ರೂ.10,000 ಹಣ ನೀಡಿದ್ದರೆ ಜನರಲ್ಲಿ ಕೊಳ್ಳುವ ಶಕ್ತಿಯೂ ಬರುತ್ತಿತ್ತು, ಜೊತೆಗೆ ರಾಜ್ಯದ ವ್ಯಾಪಾರ ವಹಿವಾಟು ಪ್ರಕ್ರಿಯೆಗೂ ಮರುಜೀವ ಬರುತ್ತಿತ್ತು. ಈ ಬಗ್ಗೆ ನಾನು ಹಲವು ಬಾರಿ ಪತ್ರ ಬರೆದರೂ ಸರ್ಕಾರ ನಮ್ಮ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದದ್ದು ದುರದೃಷ್ಟಕರ ಎಂದು ಹೇಳಿದರು.

15ನೇ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ರೂ.5,495 ಕೋಟಿಯ ವಿಶೇಷ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು, ಆದರೆ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಆಯೋಗದ ಶಿಫಾರಸನ್ನು ತಿರಸ್ಕರಿಸಿದರು. ಈ ವಿಚಾರವನ್ನು ನಾನು ಕಳೆದ ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೆ, ಆಗ ಸರ್ಕಾರ ವಿಶೇಷ ಅನುದಾನ ಪಡೆಯಲು ಕೇಂದ್ರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿತ್ತು, ಇಂದಿಗೂ ಸರ್ಕಾರದ ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ ಕರ್ನಾಟಕಕ್ಕೆ ಹೆಚ್ಚಿನ ತೆರಿಗೆ ಪಾಲು ನೀಡಲಾಗಿದೆ ಎಂದು ಅಮಿತ್‌ ಶಾ ಅವರು ರಾಜ್ಯಕ್ಕೆ ಬಂದಾಗ ಸುಳ್ಳು ಹೇಳಿದ್ದರು. ಕೇಂದ್ರವು ನಮ್ಮ ರಾಜ್ಯಕ್ಕೆ ತೆರಿಗೆ ಸಂಗ್ರಹದ 42% ಅನ್ನು ವಾಪಾಸು ನೀಡಬೇಕು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ರಾಜ್ಯಕ್ಕೆ ಸಂಪೂರ್ಣ ಪ್ರಮಾಣದ ತೆರಿಗೆ ಪಾಲು ಬಂದಿಲ್ಲ. 2014-15 ರಲ್ಲಿ ಕೇವಲ 27%. 2015-16 ರಲ್ಲಿ 34%, 2016-17 ರಲ್ಲಿ 35%, 2017-18ರಲ್ಲಿ 35.37%, 2018-19ರಲ್ಲಿ 33% ಮಾತ್ರ ರಾಜ್ಯಕ್ಕೆ ಬಂದಿದೆ. ಅಂದರೆ ಪ್ರತಿ ವರ್ಷ ಸುಮಾರು ರೂ.30,000 ಕೋಟಿಯಂತೆ 5 ವರ್ಷಗಳಿಗೆ ರೂ.1.5 ಲಕ್ಷ ಕೋಟಿ ನಷ್ಟವಾಗಿದೆ. ಇದು ರಾಜ್ಯಕ್ಕೆ ನರೇಂದ್ರ ಮೋದಿಯವರ ಸರ್ಕಾರ ಮಾಡಿದ ಮೋಸ ಅಂತ ಅಲ್ಲದೆ ಬೇರೇನು ಹೇಳಬೇಕು? ಎಂದು ಪ್ರಶ್ನಿಸಿದರು.

2022ರ ನಂತರ ರಾಜ್ಯಕ್ಕೆ ಬರುವ ಜಿ.ಎಸ್.ಟಿ ಪರಿಹಾರವೂ ನಿಲ್ಲಲಿದೆ. ಇದರಿಂದ ಈಗಿರುವ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ರಾಜ್ಯ ಸರ್ಕಾರವು ನಾಡಿನ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಿ.ಎಸ್.ಟಿ ಪರಿಹಾರವನ್ನು ಮತ್ತೆ 5 ವರ್ಷ ಮುಂದುವರೆಸಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಯಡಿಯೂರಪ್ಪನವರು ರಾಜ್ಯ ಬಜೆಟ್‌ ಮಂಡಿಸಿದ ನಂತರದ ದಿನ ತೆರಿಗೆ ಹೊರೆಯಿಲ್ಲದ ಬಜೆಟ್‌ ಅಂತ ಪತ್ರಿಕೆಗಳು ವರದಿ ಮಾಡಿದವು. ನಿಜ ಹೇಳಬೇಕೆಂದರೆ ಯಡಿಯೂರಪ್ಪನವರಿಗೆ ತೆರಿಗೆ ಹೆಚ್ಚಳ ಮಾಡಲು ಅವಕಾಶವೇ ಇಲ್ಲವಾಗಿದೆ, ಈಗಾಗಲೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ, ಇನ್ನುಳಿದಂತೆ ಅಬಕಾರಿ ತೆರಿಗೆ ಗರಿಷ್ಠ ಮಟ್ಟ ತಲುಪಿದೆ. ಇನ್ನು ತೆರಿಗೆ ಏರಿಕೆ ಮಾಡುವುದು ಎಲ್ಲಿಂದ ಸಾಧ್ಯ? ಎಂದು ಪ್ರಶ್ನಿಸಿದರು.

ಈ ಸಾಲಿನ ಬಜೆಟ್‌ ಗಾತ್ರ ಕಳೆದ ಬಾರಿಗಿಂತ ಸ್ವಲ್ಪ ಹೆಚ್ಚಿದೆ, ಆದರೆ ಕೊರೋನಾ ರೋಗ ಇನ್ನೂ ಕೂಡ ಸಂಪೂರ್ಣವಾಗಿ ಹೋಗಿಲ್ಲ. ಈ ಕಾರಣದಿಂದ ನಿರೀಕ್ಷಿತ ಪ್ರಮಾಣದ ತೆರಿಗೆ ಸಂಗ್ರಹವಾಗುವುದು ಅನುಮಾನ ಮತ್ತು ರಾಜ್ಯದ ಜಿ.ಎಸ್.ಡಿ.ಪಿ ಬೆಳವಣಿಗೆ ದರ -2.6 ಇದೆ. ಹಾಗಾಗಿ ಬಜೆಟ್‌ ತನ್ನ ನಿರೀಕ್ಷಿತ ಗುರಿಗಳನ್ನು ತಲುಪುವುದು ಸ್ವಲ್ಪ ಕಷ್ಟಸಾಧ್ಯ ಎಂದರು.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ