ಹೊಸದಿಲ್ಲಿ: ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ ನಲ್ಲಿ ಕನ್ನಡಾಭಿಮಾನ ಮೆರೆದಿದ್ದಾರೆ.
ಸಂಸತ್ ಭವನದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ರಾಜ್ಯಸಭೆಗೆ ಹೊಸದಾಗಿ ಚುನಾಯಿತರಾದ 61 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಮಾಣ ವಚನ ಬೋಧಿಸಿದರು.
20 ರಾಜ್ಯದ 61 ಸದಸ್ಯರು ಇತ್ತೀಚಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಕಾಂಗ್ರೆಸ್ ಹಿರಿಯ ಮುಖಂಡ, ಮಲ್ಲಿಕಾರ್ಜುನ ಖರ್ಗೆ, ಎಚ್ ಡಿ. ದೇವೇಗೌಡ, ಅಶೋಕ ಗಸ್ತಿ ಹಾಗೂ ಈರಣ್ಣ ಕಡಾಡಿ ನಾಲ್ವರು ಸದಸ್ಯರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ಲೋಕಸಭೆಯಲ್ಲಿ ಸಚಿವ ಸದಾನಂದಗೌಡ, ಸಂಸದರಾದ ಡಿ.ಕೆ. ಸುರೇಶ, ಪ್ರತಾಪ ಸಿಂಹ, ಸುಮಲತಾ ಅಂಬರೀಷ್ ಅವರು ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಠಿಸಿದ್ದರು. ಆ ಬೆನ್ನಲ್ಲೇ ಇದೀಗ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೂಡ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡ ಕಹಳೆ ಮೊಳಗಿಸಿದ್ದಾರೆ.