ಮುಂಬೈ (ಮಾರ್ಚ್ 11); ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಏರುತ್ತಲೇ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು ಶೇ.85.91 ರಷ್ಟು ಹೊಸ ಕೊರೋನಾ ಪ್ರಕರಣಗಳು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಂತೆ ದೇಶದಲ್ಲಿ ಒಂದೇ ದಿನದಲ್ಲಿ 22,854 ಹೊಸ ಪ್ರಕರಣಗಳು ಕಂಡುಬಂದಿದೆ. ಇನ್ನೂ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 13,659 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರದ ಶಿವಸೇನೆ ಸರ್ಕಾರ ಅಧಿಕ ಸೋಂಕು ಪೀಡಿತ ನಾಗ್ಪುರವನ್ನು ಮಾರ್ಚ್ 15 ರಿಂದ ಮಾರ್ಚ್ 21 ರವರೆಗೆ ಒಂದು ವಾರ ಲಾಕ್ ಡೌನ್ ಮಾಡಿ ಆದೇಶಿಸಿದೆ. ಲಾಕ್‌ಡೌನ್ ವೇಳೆ ಅಗತ್ಯ ಸೇವೆಗಳಾದ ತರಕಾರಿ, ಹಣ್ಣಿನ ಅಂಗಡಿಗಳು ಮತ್ತು ಹಾಲಿನ ಡೈರಿಗಳು ಮಾತ್ರ ಕಾರ್ಯನಿರ್ವಹಿಸಲಿವೆ.
ಮಹಾರಾಷ್ಟ್ರದಲ್ಲಿ ಸುಮಾರು ಒಂದು ತಿಂಗಳಿನಿಂದ ಕೋವಿಡ್ -19 ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿರುವುದರಿಂದ ರಾಜ್ಯದ ಹೆಚ್ಚಿನ ಭಾಗಗಳು ಲಾಕ್‌ಡೌನ್‌ಗೆ ಹೋಗಬಹುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೂಚಿಸಿದ್ದಾರೆ.
ಈ ಕುರಿತು ಜನರಿಗೆ ಮಾಹಿತಿ ನೀಡಿರುವ ಉದ್ಧವ್ ಠಾಕ್ರೆ, “ರಾಜ್ಯದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಏರುತ್ತಲೇ ಇದೆ. ಮುಂಬರುವ ದಿನಗಳಲ್ಲಿ, ಮತ್ತಷ್ಟು ಸ್ಥಳಗಳಲ್ಲಿ ಲಾಕ್‌ಡೌನ್ ಅನಿವಾರ್ಯವಾಗಬಹುದು. ಮುಂದಿನ ಎರಡು ದಿನಗಳಲ್ಲಿ ನಾವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ” ತಿಳಿಸಿದ್ದಾರೆ.
ನಾಗ್ಪುರ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಬರುವ ಎಲ್ಲ ಪ್ರದೇಶಗಳಲ್ಲಿಯೂ ಲಾಕ್ ಡೌನ್ ವಿಧಿಸಲಾಗಿದೆ. ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಇಂದು ರಾತ್ರಿ 8 ರಿಂದ ಸೋಮವಾರ ಬೆಳಿಗ್ಗೆ 8 ರವರೆಗೆ ಮೂರು ದಿನಗಳ ಕಾಲ ‘ಜನತಾ ಕರ್ಫ್ಯೂ’ ವಿಧಿಸಲಾಗಿದೆ. ಎರಡು ದಿನಗಳ ಹಿಂದಷ್ಟೇ ಈ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತ್ತು.
ಮಹಾರಾಷ್ಟ್ರವು ದಿನನಿತ್ಯದ 13,659 ಹೊಸ ಕೊರೊನಾ ಪ್ರಕರಣಗಳನ್ನು ವರದಿ ಮಾಡುತ್ತಿದ್ದು, ಇದು ದೇಶದ ದೈನಂದಿನ ಹೊಸ ಪ್ರಕರಣಗಳಲ್ಲಿ ಸುಮಾರು ಶೇ.60 ರಷ್ಟಿದೆ. ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳ ರಾಜ್ಯದಲ್ಲಿ ಮಹಾರಾಷ್ಟ್ರ ಮುಂದಿದೆ.