ಯಾದಗಿರಿ: ನಗರದ ಬೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ ಅವರ ಮನೆ, ಕಚೇರಿ, ಬ್ಯಾಂಕ್ ಲಾಕರ್ ಮೇಲೆ ದಾಳಿ ಮಾಡಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ನಗದು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಬೆಳಿಗ್ಗೆಯೇ ಮೂರು ಕಡೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.
₹1.71 ಲಕ್ಷ ನಗದು, 800 ಗ್ರಾಂ ಚಿನ್ನ, 1,362 ಗ್ರಾಂ ಬೆಳ್ಳಿ, ಯಾದಗಿರಿಯಲ್ಲಿ ಮೂರಂತಸ್ತಿನ ಮನೆ, ಇನ್ನುಳಿದ ಕಡೆ 9 ನಿವೇಶನ, ಆಶನಾಳ ತಾಂಡಾದಲ್ಲಿ 3.27 ಗುಂಟೆ ಕೃಷಿ ಜಮೀನು, ಎರಡು ಬೈಕ್‌ಗಳು, ಒಂದು ಕಾರು ಪತ್ತೆ ಹಚ್ಚಿದ್ದಾರೆ.
ಸರ, ಕಿವಿಯೋಲೆ, ಉಂಗುರ, ಮೂಗುತಿ, ಬೆಳ್ಳಿ ತಟ್ಟೆ, ಚೊಂಬು, ಪೂಜಾ ಸಾಮಗ್ರಿ, ಲೋಟ, ಬೆಳ್ಳಿಗಟ್ಟಿ ಸೇರಿದಂತೆ ಕಂತೆ ಕಂತೆ ನೋಟು ಪತ್ತೆಯಾಗಿವೆ.
‘ಯಾದಗಿರಿಯಲ್ಲಿ ಒಂದು ಮನೆ, 7 ನಿವೇಶನ, ಕಲಬುರ್ಗಿಯಲ್ಲಿ 1 ನಿವೇಶನ, ಕೃಷಿ ಜಮೀನು ₹86.91 ಲಕ್ಷ ಮೌಲ್ಯ, ₹34.57 ಲಕ್ಷ ಚಿನ್ನದ ಮೌಲ್ಯ, ₹71,000 ಮೌಲ್ಯದ ಬೆಳ್ಳಿ, ಬ್ಯಾಂಕ್ ಲಾಕರ್‌ನಲ್ಲಿದ್ದ ₹31.75 ಲಕ್ಷ, ಒಂದು ಕಾರು, ಎರಡು ಬೈಕ್‌ಗಳ ಮೌಲ್ಯ ₹10.30 ಲಕ್ಷ ಆಗಿದೆ. ಈ ಎಲ್ಲ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಎಸಿಬಿ ಎಸ್‌ಪಿ ಮಹೇಶ ಮೇಘಣ್ಣನವರ ತಿಳಿಸಿದ್ದಾರೆ.
ಎಸಿಬಿ ಡಿವೈಎಸ್ಪಿ ಉಮಾಶಂಕರ, ಇನ್‌ಸ್ಪೆಕ್ಟರ್ ಗುರುಪಾದ ಬಿರಾದಾರ, ಬೀದರ್‌ನ ಶರಣ ಬಸವ, ಸಿಬ್ಬಂದಿ ಗುತ್ತಪ್ಪಗೌಡ, ಮರೆಪ್ಪ, ವಿಜಯಕುಮಾರ, ಅಮರನಾಥ, ರವಿ, ಈರಣ್ಣ, ಸಾಬಣ್ಣ, ಅನಿಲ, ಶ್ರೀಕಾಂತ ದಾಳಿಯಲ್ಲಿ ಪಾಲ್ಗೊಂಡಿದ್ದರು.