ಮಣಿಪಾಲ:ಉಡುಪಿ ಜಿಲ್ಲೆಯ ತ್ರಾಸಿ-ಮರವಂತೆ, ಒತ್ತಿನೆಣೆ ಹಾಗೂ ಇತರ ಕಡಲ ತೀರಗಳನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ(ಮಾರ್ಚ್ 08) ಮಂಡಿಸಿದ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿರುವುದಾಗಿ ತಿಳಿಸಿದರು.
ಮೀನುಗಾರಿಕೆಗೆ ಸಿಕ್ಕಿದ್ದೇನು?
ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿಲೋ ಲೀಟರ್ ಡೀಸೆಲ್ ಮೇಲಿನ ಮಾರಾಟ ಕರ ಮರುಪಾವತಿಯ ಬದಲು ಡೀಸೆಲ್ ಡೆಲಿವರಿ ಪಾಯಿಂಟ್ ನಲ್ಲಿಯೇ ಕರರಹಿತ ದರದಲ್ಲಿ ಡೀಸೆಲ್ ವಿತರಣೆಗೆ ಕ್ರಮ.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ 62 ಕೋಟಿ ರೂಪಾಯಿ ಅನುದಾನ. ರಾಜ್ಯದಲ್ಲಿ 16 ಮೀನುಮರಿ ಉತ್ಪಾದನಾ ಕೇಂದ್ರಗಳ ತಾಂತ್ರಿಕ ಉನ್ನತೀಕರಣಕ್ಕೆ 2 ಕೋಟಿ ರೂ. ಅನುದಾನ.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಆರು ಕೋಟಿ ರೂ,ಗಳ ವೆಚ್ಚದಲ್ಲಿ ಮೀನು ಉತ್ಪನ್ನಗಳ ಸಂಸ್ಕರಣೆಗೆ ಆಧುನಿಕ ಸಂಸ್ಕರಣಾ ಮತ್ತು ಮೌಲ್ಯವರ್ಧನಾ ಕೇಂದ್ರ ಸ್ಥಾಪನೆ.
ರಾಜ್ಯಾದ್ಯಂತ 30 ಕೋಟಿ ರೂ.ಗಳ ವೆಚ್ಚದಲ್ಲಿ ಮೀನು ಮಾರಾಟ ಘಟಕ ಹಾಗೂ ಮತ್ಸ್ಯದರ್ಶಿನಿಗಳ ಸ್ಥಾಪನೆ.