ಬೆಳಗಾವಿ: ಕಳಸಾ, ಬಂಡೂರಿ ನಾಲೆ ನೀರನ್ನು ಮಲಪ್ರಭೆಗೆ ಹರಿಸಬೇಕು ಎಂಬುದು ಉತ್ತರ ಕರ್ನಾಟಕ ಜನರ ಅನೇಕ ವರ್ಷಗಳ ನಿರಂತರ ಪ್ರಯತ್ನವಾಗಿದೆ. ಇದಕ್ಕಾಗಿ ಅನೇಕ ಹೋರಾಟ, ಚಳುವಳಿಗಳು ನಡೆದಿದ್ದು, ನ್ಯಾಯಾಧೀಕರಣದಲ್ಲಿ ಸಹ ನೀರಿನ ಹಂಚಿಕೆಯಾಗಿದೆ. ಆದರೆ ಮೂರು ವರ್ಷ ಕಳೆದರೂ ಇನ್ನೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಗೋವಾ ಸರ್ಕಾರ ಪದೇ ಪದೇ ಆಕ್ಷೇಪ ತೆಗೆಯುತ್ತಿರುವುದು. ಕಳಸಾ ನಾಲೆ ನೀರನ್ನು ಕರ್ನಾಟಕ ಸರ್ಕಾರ ಯಾವುದೇ ಅನುಮತಿ ಇಲ್ಲದೇ ತಿರುವು ಯೋಜನೆ ಮೂಲಕ ಬಳಸಿಕೊಂಡಿದೆ ಎಂದು ಗೋವಾ ಕ್ಯಾತೆ ತೆಗೆದಿದೆ. ಈ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯೆಯ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಮೂರು ರಾಜ್ಯಗಳ ಜಂಟಿ ಪರಿಶೀಲನಾ ಸಮಿತಿ ರಚನೆ ಮಾಡಿದ್ದು, ಸ್ಥಳ ಪರಿಶೀಲನೆ ನಡೆಸಬೇಕು. ಇದರ ವರದಿಯನ್ನು ನಾಲ್ಕು ವಾರದಲ್ಲಿ ನೀಡುವಂತೆ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಲಪ್ರಭಾ ಎಡದಂಡೆ ಅಧೀಕ್ಷಕ ಇಂಜಿನಿಯರ್ ಕೃಷ್ಟೋಜಿ ರಾವ್ ಅವರನ್ನು ನೇಮಕ ಮಾಡಿದೆ. ಇದೀಗ ಗೋವಾ ಸರ್ಕಾರ ಸಹ ಅಧೀಕ್ಷಕ ಅಭಿಯಂತರ ಎಂ ಕೆ ಪ್ರಸಾದ್ ನೇಮಕ ಮಾಡಿ ಆದೇಶ ಹೊರಡಿಸಿದೆ. ಆದರೇ ಮಹಾರಾಷ್ಟ್ರ ಸರ್ಕಾರ ತಮ್ಮ ಪ್ರತಿನಿಧಿಯ ಹೆಸರನ್ನು ಇನ್ನೂ ಫೈನಲ್ ಮಾಡಿಲ್ಲ.ಮಹದಾಯಿ ನ್ಯಾಯಾಧೀಕರಣದಲ್ಲಿ ರಾಜ್ಯಕ್ಕೆ 13.42 ಟಿಎಂಸಿ ನೀರು ಹಂಚಿಕೆಯಾಗಿದೆ. ಕಳಸಾ ನಾಲೆಯಿಂದ 1.72 ಟಿಎಂಸಿ, ಬಂಡೂರಿ ನಾಲೆಯಿಂದ 2.18 ಟಿಎಂಸಿ, ವಿದ್ಯುತ್ ಗೆ 8 ಟಿಎಂಸಿ, ಮಹದಾಯಿ ಕಣಿವೆಯೊಳಗಿನ ವಿವಿಧ ಯೋಜನೆಗೆ 1.5 ಟಿಎಂಸಿ ನೀರು ಹಂಚಿಕೆಯಾಗಿದೆ. ಕೇಂದ್ರ ಸರ್ಕಾರದ ಇದರ ಗೆಜೆಟ್ ನೋಟಿಫಿಕೇಷನ್ ಸಹ ಹೊರಡಿಸಿದೆ. ರಾಜ್ಯ ಸರ್ಕಾರಕ್ಕೆ ಕಾಮಗಾರಿ ನಡೆಸಲು ಅರಣ್ಯ, ವನ್ಯಜೀವಿ ಹಾಗೂ ಪರಿಸರ ಇಲಾಖೆಯ ಅನುಮತಿ ಬೇಕಿದೆ. ಇದನ್ನು ಕೇಂದ್ರ ಸರ್ಕಾರ ಈವರೆಗೆ ನೀಡಿಲ್ಲ. ಗೋವಾ ಸರ್ಕಾರ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

Laxmi News 24×7