ನವದೆಹಲಿ, ಮಾ.05: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂಧನ ಏರಿಕೆ ಮಾಡಬೇಕೆಂಬ ಗ್ರಾಹಕರ ಬೇಡಿಕೆಯಲ್ಲಿ ಅರ್ಥವಿರುವುದನ್ಬು ಅವರು ಒಪ್ಪಿಕೊಂಡಿದ್ದಾರೆ.
ಐಡಬ್ಲ್ಯೂಪಿಸಿಯಲ್ಲಿ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ದರ ನೂರು ರೂ ಗಡಿ ದಾಟಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯಗಳ ತೆರಿಗೆಗಳು ಕಾರಣವಾಗಿವೆ ಎಂದರು.
ತೈಲದ ಮೇಲಿನ ತೆರಿಗೆ ಇಳಿಸುವುದು ಧರ್ಮಸಂಕಟದ ವಿಷಯವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಕೇಂದ್ರದ ತೆರಿಗೆ ಮಾತ್ರವಲ್ಲ, ರಾಜ್ಯಗಳೂ ಸುಂಕ ವಿಧಿಸುತ್ತವೆ. ಹಾಗಾಗಿ, ಇದು ಕೇವಲ ಕೇಂದ್ರ ಸರ್ಕಾರದ ವಿಷಯವಲ್ಲ. ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಈ ಬಗ್ಗೆ ಮಾತನಾಡಬೇಕು. ಎಂದು ತಿಳಿಸಿದ್ದಾರೆ.
ತೈಲ ಬೆಲೆಗಳು ಕಡಿಮೆಯಾಗಬೇಕು ಎಂದು ಹೇಳಲು ಗ್ರಾಹಕರಿಗೆ ಸಾಕಷ್ಟು ಕಾರಣಗಳಿವೆ, ನಿಜಕ್ಕೂ ತೈಲ ಬೆಲೆ ಏರಿಕೆ ಗ್ರಾಹಕರಿಗೆ ಒಂದು ಹೊರೆಯಾಗಿದೆ ಎಂದರು.
ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರುವ ವಿಷಯ ಜಿಎಸ್‌ಟಿ ಮಂಡಳಿ ಗಮನದಲ್ಲಿದೆ. ಅದರ ಜಾರಿ ಬಗ್ಗೆ ಮಂಡಳಿ ನಿರ್ಧಾರ ಕೈಗೊಳ್ಳಬೇಕು .ಮುಂದಿನ ಸಭೆಯಲ್ಲಿ ಜಿಎಸ್‌ಟಿ ಮಂಡಳಿಗೆ ಇಂತಹ ಪ್ರಸ್ತಾಪವನ್ನು ಕೇಂದ್ರವು ಸಲ್ಲಿಸುತ್ತದೆಯೇ ಎಂಬ ಪ್ರಶ್ನೆಗೆ ಕೌನ್ಸಿಲ್ ಸಭೆಯ ದಿನಾಂಕ ಹತ್ತಿರವಿರುವಾಗ ನಿರ್ಧಾರ ತೆಗೆದುಕೊಳ್ಳಲಾಗುವುದು ನಿರ್ಮಲಾ ಸೀತಾರಾಮನ್ ಉತ್ತರಿಸಿದರು.