Breaking News

ಕೊರೊನಾ ತಂದಿಟ್ಟ ಸಂಕಷ್ಟ: ಮರದ ಕೆಳಗೆ ಬದುಕು ಕಂಡುಕೊಂಡ ಮಹಿಳೆ

Spread the love

ಸಿದ್ದಾಪುರ: ಅಪ್ಪ, ಅಮ್ಮ, ಪತಿ, ಕುಟುಂಬದ ಯಾರೂ ಇಲ್ಲ. ತಾನು ಓದದೇ ಇದ್ದರೂ, ತನ್ನ ಮಕ್ಕಳನ್ನು ಓದಿಸಬೇಕೆಂಬ ಛಲದಿಂದ ಜೀವನ ಸಾಗಿಸುತ್ತಿದ್ದ ಮಹಿಳೆಗೆ ಕೊರೊನಾ ಸಂಕಷ್ಟ ತಂದೊಡ್ಡಿದ್ದು, ಇದೀಗ ಗುಡಿಸಲಿನಲ್ಲಿ ವಾಸ ಮಾಡುವ ಸ್ಥಿತಿ ಬಂದಿದೆ.

ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿ ಸಮೀಪದ ತಟ್ಟಳ್ಳಿ ಹಾಡಿಯ ನಿವಾಸಿ ಸುನಿತ ಮದುವೆಯಾದ ಕೆಲವೇ ವರ್ಷಗಳಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದರು. ಕುಟುಂಬವೂ ಸುನಿತಾರನ್ನು ಕೈಬಿಟ್ಟಾಗ ಅವರಿಗೆ ದಿಕ್ಕು ತೋಚದಾಗಿತ್ತು. ಮುದ್ದಾದ ಇಬ್ಬರು ಮಕ್ಕಳನ್ನು ನೆನೆದು, ಅವರಿಗಾಗಿ ಬದುಕುವ ಛಲದಿಂದ ಕೂಲಿ ಕೆಲಸ ಮಾಡಿಕೊಂಡು, ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಜೀವನ ಸಾಗಿಸುತ್ತಿದ್ದರು. ಆದರೆ, ಕೊರೊನಾ ಎಂಬ ಮಹಾಮಾರಿ ಸುನಿತಾ ಜೀವನವನ್ನು ಮತ್ತೆ ಸಂಕಷ್ಟಕ್ಕೆ ತಂದೊಡ್ಡಿದೆ.

ಪೊನ್ನಂಪೇಟೆಯ ಮನೆಯೊಂದರಲ್ಲಿ ಬಾಡಿಗೆಗಿದ್ದ ಸುನಿತಾ ಅವರು, ಗೋಣಿಕೊಪ್ಪಲುವಿನ ಅಂಗಡಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇತ್ತ ಮನೆ ಬಾಡಿಗೆ, ಪ್ರತಿದಿನದ ಖರ್ಚಿನೊಂದಿಗೆ, ಹಾಸನದಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದ ಮಗಳು ಹಾಗೂ ಪದವಿ ಮಾಡುತ್ತಿರುವ ಮಗನ ಕಾಲೇಜಿನ ಶುಲ್ಕ, ಖರ್ಚನ್ನು ನಿಭಾಯಿಸಬೇಕಿತ್ತು. ಲಾಕ್‌ಡೌನ್‌ ವೇಳೆ ಕೆಲಸವಿಲ್ಲದೇ ಸಂಘ ಸಂಸ್ಥೆ ಹಾಗೂ ಬಡ್ಡಿಗೆ ಹಣ ಪಡೆದು ಜೀವನ ಸಾಗಿಸುತ್ತಿದ್ದರು. ಬಳಿಕ ಅವರಿಗೂ ಕೋವಿಡ್‌ ದೃಢಪಟ್ಟ ಮೇಲೆ ತಿಂಗಳ ಕಾಲ ಚಿಕಿತ್ಸೆ ಪಡೆದು ಗುಣವಾಗಿದ್ದರು. ಈ ನಡುವೆ ಹಲವು ತಿಂಗಳುಗಳ ಬಾಡಿಗೆ ಬಾಕಿಯಿದ್ದ ಕಾರಣ ಸುನಿತಾರನ್ನು ಮನೆ ಖಾಲಿ ಮಾಡುವಂತೆ ಮಾಲೀಕರು ತಿಳಿಸಿದ್ದರು.

ಕೊನೆಗೆ ಮಾಲ್ದಾರೆಯ ತಟ್ಟಳ್ಳಿ ಹಾಡಿಯ ತಂದೆಯ ಜಾಗಕ್ಕೆ ಮಕ್ಕಳೊಂದಿಗೆ ಬಂದ ಸುನಿತಾ ಮರದ ಅಡಿಯಲ್ಲೇ ಜೀವನ ಸಾಗಿಸಲು ಮುಂದಾಗಿದ್ದು, ಸ್ಥಳೀಯ ಸಂಘಗಳ ಸಹಾಯದಿಂದ ಇದೀಗ ಗುಡಿಸಲು ನಿರ್ಮಾಣವಾಗಿದೆ.

ಯುವಕರಿಂದ ಸಹಾಯ: ಮಾಲ್ದಾರೆಯ ಜನಪರ ಸಂಘದ ಸದಸ್ಯರು ಸುನಿತಾ ಅವರ ಸಮಸ್ಯೆಯನ್ನು ಅರಿತು ವಿವಿಧ ಸಂಘಗಳ ಸಹಾಯದೊಂದಿಗೆ ತಾತ್ಕಾಲಿಕವಾದ ಶೆಡ್‌ ನಿರ್ಮಿಸಿಕೊಡಲಾಗಿದೆ. ತನ್ನ ಸಮಸ್ಯೆಯನ್ನು ವಿಡಿಯೊ ಮೂಲಕ ಕಣ್ಣೀರಿಟ್ಟು ಹೇಳಿದ ಸುನಿತಾ ಅವರ ವಿಡಿಯೊ ಗಮನಿಸಿದ ಜನಪರ ಸಂಘದ ಸದಸ್ಯರು, ಸ್ಥಳಕ್ಕೆ ತೆರಳಿ ಸ್ವತಃ ಯುವಕರೇ ನಿಂತು ಶೆಡ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಸದ್ಯಕ್ಕೆ ಸುನಿತಾ ಹಾಗೂ ಮಗ ಶೆಡ್‍ನಲ್ಲಿ ದಿನ ದೂಡುತ್ತಿದ್ದು, ಮತ್ತಷ್ಟು ಸಹಾಯದ ನಿರೀಕ್ಷೆಯಲ್ಲಿ ಇದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ