ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ಹರಡುತ್ತಿರುವ ನಡುವೆ ಮಹಾರಾಷ್ಟ್ರದ ಐವರು ಸಚಿವರಿಗೆ ಸೋಂಕು ದೃಢವಾಗಿರುವುದು ಈಗ ವರದಿಯಾಗಿದೆ.
ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ Chhagan Bhujbal ಈಗ ಕೋವಿಡ್ ಪಾಸಿಟಿವ್ ದೃಢಗೊಂಡಿರುವವರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
“ನಾನು ಕೋವಿಡ್ ಸೋಂಕಿಗೆ ಒಳಗಾಗಿದ್ದೇನೆ. ಎರಡು ಮೂರು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ, ಜಲ ಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ಆಹಾರ ಮತ್ತು ಔಷಧೋತ್ಪನ್ನಗಳ ಸಚಿವ ಡಾ. ರಾಜೇಂದ್ರ ಶಿಂಗ್ನೆ, ಆರೋಗ್ಯ ಮಂತ್ರಿ ರಾಜೇಶ್ ಟೋಪೆ, ಶಿಕ್ಷಣ ಸಚಿವ ಓಂ ಪ್ರಕಾಶ್ ಕೋವಿಡ್ ಸೋಂಕಿಗೆ ಒಳಗಾಗಿದ್ದರು.
ಮಹಾರಾಷ್ಟ್ರದ 43 ಸಚಿವರುಗಳ ಪೈಕಿ 26 ಮಂದಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದು, ಸೋಂಕಿತರ ಪಟ್ಟಿಗೆ ಉಪ ಮುಖ್ಯ ಮಂತ್ರಿ ಅಜಿತ್ ಪವಾರ್, ಪಿ ಡಬ್ಲ್ಯೂ ಡಿ ಮಂತ್ರಿ ಅಶೋಕ್ ಚಾವನ್ ಕೂಡ ಸೇರಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಆತಂಕ ಹೆಚ್ಚಾಗಿರುವ ಕಾರಣ ಅಲ್ಲಿನ ಸರ್ಕಾರ ಕೆಲವು ಪ್ರದೇಶಗಳಿಗೆ ನಿರ್ಬಂಧಗಳನ್ನು ಹೇರಿದೆ.
ಕೆಲವು ದಿನಗಳ ಹಿಂದೆ ಶಿವಸೇನೆಯ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಮಹಾರಾಷ್ಟ್ರದಲ್ಲಿ ಜನರು ಎಚ್ಚೆತ್ತುಕೊಳ್ಳದಿದ್ದರೇ, ಲಾಕ್ಡೌನ್ ಹೇರುವ ಪರಿಸ್ಥಿತಿ ಬರಬಹುದು ಎಂದು ಪ್ರಕಟಿಸಿತ್ತು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಇದೆ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು.