ಬೆಳಗಾವಿ: ಜು. 25 ರಂದು ತಮ್ಮ ತಮ್ಮ ಮನೆಯಲ್ಲಿಯೇ ಬಸವ ಪಂಚಮಿ ಆಚರಿಸುವಂತೆ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ ಅವರು ಕರೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಭಾರೀ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಬದಲು ತಮ್ಮ ತಮ್ಮ ಮನೆಗಳಲ್ಲಿಯೇ ಬಸವ ಪಂಚಮಿ ಆಚರಿಸುವಂತೆ ಅಭಿಮಾನಿಗಳಿಗೆ, ಸ್ವಾಮೀಜಿಗಳಿಕೆ ಹಾಗೂ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರಿಗೆ ಸತೀಶ ಜಾರಕಿಹೊಳಿ ಅವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಪ್ರತಿ ವರ್ಷ 40 ಸಾವಿರಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿವೆ. ಹಾವು ಹಾಲು ಕುಡಿಯುವುದಿಲ್ಲ ಎಂಬುವುದು ಗೊತ್ತಿದ್ದರು ಅವೈಜ್ಞಾನಿಕ ಹಬ್ಬದ ಕಾರಣಕ್ಕಾಗಿ ಲಕ್ಷಾಂತರ ಲೀಟರ್ ಹಾಲು ವ್ಯರ್ಥ ಮಾಡುವ ಬದಲು ಬಡ ಮಕ್ಕಳಿಗೆ, ರೋಗಿಳಿಗೆ ನೀಡುವ ಮೂಲಕ ಪೌಷ್ಟಿಕ ಆಹಾರ ಪೋಲಾಗುವುದನ್ನು ತಪ್ಪಿಸಬಹುದು. ಹುತ್ತಕ್ಕೆ ಹಾಲೆರೆವ ಬದಲು ರೋಗಗಳಿಗೆ, ಬಡ ಮಕ್ಕಳಿಗೆ ಹಂಚುವಂತೆ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ಸತೀಶ ಜಾರಕಿಹೊಳಿ ಅವರು ಸಂಸ್ಥಾಪಿಸಿರುವ ಮಾನವ ಬಂಧುತ್ವ ವೇದಿಕೆ ಕಳೆದ ಹಲವು ವರ್ಷಗಳಿಂದ ಮೌಢ್ಯ ವಿರುದ್ದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದೆ.
ಇತ್ತೀಚಿಗಷ್ಟೇ ಶಾಸಕ ಸತೀಶ ಅವರ ನೂತನ ಕಾರಿಗೆ ಸ್ಮಶಾನದಲ್ಲಿ ಚಾಲನೆ ನೀಡುವ ಮೂಲಕ ಸ್ಮಶಾನವೂ ಕೂಡ ಒಳ್ಳೆಯ ಸ್ಥಳ ಎಂಬ ಸಂದೇಶ ಸಾರಿದ್ದಾರೆ.