ಭಾರೀ ಸಂಖ್ಯೆಯಲ್ಲಿ ಮತದಾರರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ಕೇರಳ ಬಿಜೆಪಿ ದೇವರ ನಾಡಿನಲ್ಲಿ ತನ್ನದೊಂದು ಕೋಟೆ ಕಟ್ಟಲು ನೋಡುತ್ತಿದೆ.
ಮೆಟ್ರೋ ಮಾನವ ಇ. ಶ್ರೀಧರನ್ ಬಿಜೆಪಿ ಸೇರಿದ ಬಳಿಕ, ಕೇಸರಿ ಪಾಳಯವು ಇದೀಗ ಒಲಿಂಪಿಯನ್ ಪಿ.ಟಿ. ಉಷಾರನ್ನು ತನ್ನತ್ತ ಒಲಿಸಿಕೊಳ್ಳುವ ಯತ್ನದಲ್ಲಿದೆ.
ಕೃಷಿ ಸುಧಾರಣಾ ಕಾನೂನುಗಳ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ಕೊಟ್ಟ ಪಿ.ಟಿ. ಉಷಾರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಪ್ರಯತ್ನದಲ್ಲಿದೆ. ಉಷಾರ ಇತ್ತೀಚಿನ ಟ್ವೀಟ್‌ಗಳೂ ಸಹ ಆಕೆ ಕೇಸರಿ ಪಾಳೆಯದತ್ತ ವಾಲುತ್ತಿರುವಂತೆ ತೋರುತ್ತಿವೆ.
ಪರಿಸರ ಕಾರ್ಯಕರ್ತೆ ಎನ್ನಲಾಗುವ ಗ್ರೇಟಾ ಥನ್‌ಬರ್ಗ್ ಹಾಗೂ ಗಾಯಕಿ ರಿಯನ್ನಾರ ಇತ್ತೀಚಿನ ಹೇಳಿಕೆಗಳನ್ನು ಕಟುವಾಗಿ ವಿರೋಧಿಸಿದ ಮಂದಿಯಲ್ಲಿ ಒಬ್ಬರಾದ ಉಷಾ, “ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ ಇದ್ದು, ನಮ್ಮದು ನಿಜವಾದ ಪ್ರಜಾಪ್ರಭುತ್ವವಾಗಿದೆ. ನಮ್ಮ ಆಂತರಿಕ ವಿಷಯಗಳಲ್ಲಿ ತಲೆ ಹಾಕಬೇಡಿ. ನಮ್ಮ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂದು ನಮಗೆ ಗೊತ್ತಿದ್ದು, ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿಯುತ್ತಿರುವ ದೇಶ ನಮ್ಮದಾಗಿದೆ. #india against propaganda,” ಎಂದು ಟ್ವೀಟ್ ಮಾಡಿದ್ದರು.
ಕೇರಳದಲ್ಲಿ ಬಹುತೇಕ ಎಡರಂಗ ಹಾಗೂ ಕಾಂಗ್ರೆಸ್‌ನದ್ದೇ ಪಾರುಪತ್ಯ ಎಂಬಂತಿದ್ದು, ಇದೀಗ ಕೇಸರಿ ಪಡೆ ನೆಲೆಯೂರಲು ಪ್ರಯತ್ನ ನಡೆಸುತ್ತಿದೆ.