ಕೆಲ ದಿನಗಳ ಹಿಂದೆ ಕೊರೋನಾ ಸೋಂಕು ಹರಡುವಿಕೆ ತಡೆಯುವಲ್ಲಿ ಇಡೀ ದೇಶಕ್ಕೆ ಕೇರಳ ಬಳಿಕ ಕರ್ನಾಟಕ ಮಾದರಿಯಾಗಿತ್ತು. ದೇಶದ ಮಹಾನಗರಗಳ ಪೈಕಿ ಬೆಂಗಳೂರು ಮಾದರಿಯಾಗಿತ್ತು. ಈಗ ಕರ್ನಾಟಕ ಮತ್ತು ಬೆಂಗಳೂರು ‘ಹಾಟ್ ಸ್ಪಾಟ್’ಗಳಾಗಿ ಬದಲಾಗಿವೆ. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಸಮರ್ಥತೆ, ನಿಷ್ಕ್ರಿಯ ಸಚಿವರ ಬಗೆಗಿನ ಅವರ ಅಸಹಾಯಕತೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಹೈಕಮಾಂಡ್ ನಾಯಕರು ಯಡಿಯೂರಪ್ಪ ಬಗ್ಗೆ ಭಾರೀ ಅಸಮಾಧಾನ ಹೊಂದಿದ್ದಾರೆ ಎಂದು ಕೆ ಉನ್ನತ ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಯಡಿಯೂರಪ್ಪ ಅವರ ಕಾರ್ಯ ವೈಖರಿಗೆ, ಕೊರೋನಾ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಅವರು ತೋರಿದ ಕಾಳಜಿಗೆ ಹೈಕಮಾಂಡ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲಿ ಸೋಂಕು ಹರಡುವಿಕೆ ತಡೆದ ಬಗ್ಗೆ ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ಹಿನ್ನೆಲೆಯಲ್ಲಿ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದ್ದರು.
ಆದರೀಗ ಸಚಿವರಾದವರೇ ‘ದೇವರೇ ಕಾಪಾಡಬೇಕು’ ಎನ್ನುವ ಪರಿಸ್ಥಿತಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಹೈಕಮಾಂಡ್ ನಾಯಕರು ಸಿಟ್ಟಾಗಿದ್ದಾರೆ. ಹೈಕಮಾಂಡ್ ನಾಯಕರ ಸಿಟ್ಟಿಗೆ ಒಂದಲ್ಲ, ಎರಡಲ್ಲ, ಡಜನ್ ಕಾರಣಗಳಿವೆ ಎಂದು ಕೂಡ ತಿಳಿದು ಬಂದಿದೆ.
ಅವು ಈ ಕೆಳಕಂಡಂತೆ ಇವೆ :
1) ಮಾದರಿ ರಾಜ್ಯವಾಗಬಹುದಿದ್ದ ಅವಕಾಶ ಕೈ ಚೆಲ್ಲಿದ ಯಡಿಯೂರಪ್ಪ
2) ನಿಯಂತ್ರಣದಲ್ಲೇ ಇದ್ದ ರಾಜ್ಯದಲ್ಲಿ ಅಧ್ವಾನ ಸೃಷ್ಟಿಸಿದ ಬಗ್ಗೆ ಅಸಮಾಧಾನ
3) ಸಚಿವರ ನಡುವಿನ ಸಮನ್ವಯ ಇಲ್ಲದೆ ಹೆಚ್ಚಾದ ಸಮಸ್ಯೆ4) ಸಚಿವರ ನಡುವೆ ಸಮನ್ವಯ ಸಾಧಿಸಬೇಕಾದ ಸಿಎಂ ಮೌನ
5) ಸಮಸ್ಯೆ ಹೆಚ್ಚಾದಾಗ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸಚಿವರು
6) ಸಚಿವರಿಗೆ ಖಡಕ್ ಸೂಚನೆ ನೀಡದ ಸಿಎಂ ಯಡಿಯೂರಪ್ಪ
7) ಸಚಿವರ ನಡುವೆ ಶೀತಲ ಸಮರ ಹೆಚ್ಚಾಗಲು ಸಿಎಂ ಮೌನವೇ ಕಾರಣ
8) ಭ್ರಷ್ಟಾಚಾರದಿಂದ ಬಿಜೆಪಿ ಪಕ್ಷಕ್ಕೆ ರಾಷ್ಟ್ರವ್ಯಾಪ್ತಿ ಮುಜುಗರ
9) ಇತರೆ ಬಿಜೆಪಿ ಸರ್ಕಾರಗಳ ಮೇಲೂ ಮೂಡುತ್ತಿರುವ ಅನುಮಾನ
10) ಸಿದ್ದರಾಮಯ್ಯ ಕೈಗೆ ಭ್ರಷ್ಟಾಚಾರದ ಅಸ್ತ್ರ ಕೊಟ್ಟ ಸಿಎಂ, ಸಚಿವರು
11) ಭ್ರಷ್ಟಾಚಾರದ ವಿಷಯವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ
12) ಸಭೆಗಳನ್ನು ಮಾತ್ರ ನಡೆಸಿ ಕಾರ್ಯರೂಪಕ್ಕೆ ತರದ ಬಗ್ಗೆಯೂ ಆಕ್ರೋಶ
ಮಾದರಿ ರಾಜ್ಯ ಎಂದೆನಿಸಿಕೊಳ್ಳಬಹುದಾಗಿದ್ದ ಅವಕಾಶವನ್ನು ಕೈಚೆಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಕೈಯಾರೇ ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ ಎಂದು ಆಕ್ರೋಶಗೊಂಡಿರುವ ಹೈಕಮಾಂಡ್ ನಾಯಕರು ಶೀಘ್ರವೇ ಯಡಿಯೂರಪ್ಪ ಜತೆ ಚರ್ಚೆ ನಡೆಸುವ ಸಂಭವವಿದೆ.
ಅಲ್ಲದೆ ಪರಿಸ್ಥಿತಿಯನ್ನು ನಿಯಂತ್ರಿಸುವಂತೆ, ಸಚಿವರ ಮೇಲೆ ಹಿಡಿತ ಸಾಧಿಸುವಂತೆ, ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ, ಮುಖ್ಯವಾಗಿ ಭ್ರಷ್ಟಾಚಾರದ ಆರೋಪಕ್ಕೆ ಸೂಕ್ತ ಉತ್ತರ ನೀಡುವಂತೆ ಯಡಿಯೂರಪ್ಪ ಅವರಿಗೆ ಖಡಕ್ ಸೂಚನೆ ನೀಡುವ ಸಾಧ್ಯತೆಗಳಿವೆ.