ಬೆಂಗಳೂರು: ಕಾಂಗ್ರೆಸ್ ಸದಸ್ಯರ ಧರಣಿ ಮಧ್ಯೆಯೇ, ‘ಧ್ವನಿ ಮತದಿಂದ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆಗೆ ನೀಡಿರುವ ಅನುಮೋದನೆ ಸರಿಯಾಗಿದೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.
ಅಲ್ಲದೆ, ಕಾಂಗ್ರೆಸ್ ಸದಸ್ಯ ಧಿಕ್ಕಾರ ಘೋಷಣೆಯ ನಡುವೆಯೇ ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಉತ್ತರ ನೀಡಿದರು. ಆ ಬಳಿಕ, ಕಲಾಪವನ್ನು ಸಭಾಪತಿ ಅನಿರ್ದಿಷ್ಟ ಅವಧಿಗೆ ಮುಂದೂಡಿದರು.
‘ಜಾನುವಾರು ಹತ್ಯೆ ಪ್ರತಿಬಂಧಕ ಮಸೂದೆಯನ್ನು ಮತ ವಿಭಜನೆಗೆ ಹಾಕುವಂತೆ ಒತ್ತಾಯಿಸಿದರೂ, ಅದಕ್ಕೆ ಅವಕಾಶ ನೀಡದೆ ಅನುಮೋದನೆ ನೀಡಲಾಗಿದೆ’ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು. ಧರಣಿ ಹಿನ್ನೆಲೆಯಲ್ಲಿ ಒಮ್ಮೆ ಕಲಾಪ ಮುಂದೂಡಲಾಯಿತು.
ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ರೂಲಿಂಗ್ ನೀಡಿದ ಸಭಾಪತಿ, ‘ಮಸೂದೆಗೆ ಅನುಮೋದನೆ ನೀಡಿದ ಸಂದರ್ಭದ ಆಡಿಯೊ,ವಿಡಿಯೊವನ್ನು ಎರಡು ಬಾರಿ ನೋಡಿದ್ದೇನೆ. ಸಭಾಪತಿ ಪೀಠದ ಎದುರು ಧರಣಿ ನಡೆಸುವಾಗ ಮತ ವಿಭಜನೆಗೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದ್ದಾರೆಯೇ ಹೊರತು ತಮ್ಮ ಸ್ಥಾನದಲ್ಲಿ ಕುಳಿತು ಆಗ್ರಹಿಸಿಲ್ಲ. ಹೀಗಾಗಿ, ಅನುಮೋದನೆ ನೀಡಿರುವ ಕ್ರಮ ನಿಯಮದ ಪ್ರಕಾರ ಸರಿಯಾಗಿದೆ. ಈ ಬಗ್ಗೆ ನಿಮಗೆ ದೂರುಗಳಿದ್ದರೆ ಸಲ್ಲಿಸಿ’ ಎಂದು ಕಾಂಗ್ರೆಸ್ ಸದಸ್ಯರಿಗೆ ಸೂಚಿಸಿದರು.
ಅದಕ್ಕೆ ಕಾಂಗ್ರೆಸ್‌ನ ನಾರಾಯಣಸ್ವಾಮಿ ಮತ್ತು ಬಿ.ಕೆ. ಹರಿಪ್ರಸಾದ್ ವಿರೋಧಿಸಿದರು. ಇದಕ್ಕೆ ‘ಪೀಠದಿಂದ ರೂಲಿಂಗ್ ನೀಡಿದ ಬಳಿಕ ಮತ್ತೆ ಪ್ರಶ್ನಿಸಲು ಅವಕಾಶ ಇಲ್ಲ’ ಎಂದು ಸಭಾಪತಿ ಪ್ರತಿಕ್ರಿಯಿಸಿದರು.
 Laxmi News 24×7
Laxmi News 24×7
				 
		 
						
					 
						
					 
						
					