ಶಿವಮೊಗ್ಗ: ಶಾಸಕ ಬಸನಗೌಡ ಯತ್ನಾಳ್ ಮತ್ತೆ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಸಿಎಂ ಮಾತನಾಡುವುದು ಬೇಡ ಎಂದು ಹೇಳಿದರೂ ಕೇಳುತ್ತಿಲ್ಲ. ಆದರೆ ರಾಜ್ಯ ಬಿಜೆಪಿ ಸಮಿತಿಗೆ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಹೇಳಿಕೆಗಳು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಗಮನಕ್ಕೂ ಬಂದಿದೆ. ಅವರು ಕೇಂದ್ರ ಶಿಸ್ತು ಸಮಿತಿಯ ಗಮನಕ್ಕೆ ಈ ವಿಷಯ ತಂದಿದ್ದಾರೆ. ಕೇಂದ್ರ ಶಿಸ್ತು ಸಮಿತಿ ಯತ್ನಾಳ್ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ನೋಡಬೇಕಿದೆ ಎಂದರು.
ಕುರುಬ ಸಮಾವೇಶದ ಬಗ್ಗೆ ಮಾತನಾಡಿದ ಅವರು, ಕುರುಬರು ಒಟ್ಟಿಗೆ ಸೇರಿದ್ದು ಇದೇ ಮೊದಲ ಬಾರಿ. ಫೆ. 7 ರಾಜ್ಯದ ಕುರುಬರ ಪಾಲಿಗೆ ಐತಿಹಾಸಿಕ ದಿನ. ನಿರಂಜನಾನಂದ ಪುರ ಶ್ರೀಗಳು, ಈಶ್ವರಾನಂದಪುರಿ ಶ್ರೀಗಳ ಪಾದಯಾತ್ರೆ ಅಭೂತಪೂರ್ವವಾಗಿತ್ತು ಎಂದರು.
ರಾಜ್ಯದಲ್ಲಿ ಕುರುಬರಿಗೆ ಎಸ್ ಟಿ ಮೀಸಲಾತಿ ಸಿಗಬೇಕು. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕುರುಬರಿಗೆ ಎಸ್ ಟಿ ಮೀಸಲಾತಿ ಇದೆ. ಇದು ರಾಜ್ಯದ ಎಲ್ಲ ಜಿಲ್ಲೆಯ ಕುರುಬರಿಗೆ ಸಿಗಬೇಕು. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಸಮಾವೇಶಕ್ಕೆ ಪ್ರತಿಯೊಬ್ಬರೂ ತಮ್ಮ ಖರ್ಚಿನಲ್ಲಿ ಬಂದಿದ್ದಾರೆ. ಊಟದ ವ್ಯವಸ್ಥೆಯನ್ನು ದಾನಿಗಳ ನೆರವಿನಿಂದ ಮಾಡಿದ್ದೇವೆ. ಸಮಾವೇಶದ ಯಶಸ್ವಿಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ ಎಂದ ಸಚಿವ ಈಶ್ವರಪ್ಪ, ನಿರಂಜನಾನಂದಪುರಿ ಶ್ರೀಗಳು ಹಾಗೂ ಶ್ರೀ ಈಶ್ವರಾನಂದ ಪುರಿಗಳೇ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಸಮಾವೇಶಕ್ಕೆ ಆಹ್ವಾನಿಸಿದ್ದರು. ನಾನು ಕರೆ ಮಾಡಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದೆ. ಆದರೆ ಮೊದಲು ನನ್ನನ್ನು ಸಮಾವೇಶಕ್ಕೆ ಕರೆದಿಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ಬಳಿಕ ಈ ಹೋರಾಟದ ಹಿಂದೆ ಆರ್ ಎಸ್‌ಎಸ್ ಇದೆ ಹಾಗಾಗಿ ಹೋಗುವುದಿಲ್ಲ ಎಂದಿದ್ದರು. ಸಿದ್ದರಾಮಯ್ಯ ಎಷ್ಟು ಸುಳ್ಳು ಹೇಳುತ್ತಾರೆ ಎಂಬುದಕ್ಕೆ ಇದು ನಿದರ್ಶನ ಎಂದರು.