ಬೆಂಗಳೂರು, ಜ.21- ನಿರೀಕ್ಷಿತ ಖಾತೆಗಳು ಸಿಗದಿರುವುದು ಹಾಗೂ ಕೆಲವರ ಖಾತೆಗಳನ್ನು ಅದಲು-ಬದಲು ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಚಿವರು ಅತೃಪ್ತಗೊಂಡಿದ್ದು, ಭಿನ್ನಮತ ಸೋಟಗೊಂಡಿದೆ. ಬಿಜೆಪಿ ಸರ್ಕಾರದಲ್ಲಿ ಟ್ರಬಲ್ ಶೂಟರ್ ಎಂದೇ ಹೇಳಲಾಗಿರುವ ಜೆ.ಸಿ.ಮಾಧುಸ್ವಾಮಿ ತಮ್ಮ ಬಳಿ ಇದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಬದಲಾಯಿಸಿದಕ್ಕೆ ಸಚಿವ ಸ್ಥಾನಕ್ಕೇ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇದೀಗ ಅವರನ್ನು ಮನವೊಲಿಸುವ ಪ್ರಯತ್ನ ಮುಂದುವರೆದಿದ್ದು, ಶಾಸಕರಾದ ಬಿ.ಸಿ.ನಾಗೇಶ್, ಜ್ಯೋತಿಗಣೇಶ್, ಮಸಾಲೆ ಜಯರಾಂ ಮತ್ತಿತರರು ಆತುರದ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ. ಆದರೆ, ಮಾಧುಸ್ವಾಮಿ ಯಾವುದಕ್ಕೂ ಮಣಿಯದೆ ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದರ ನಡುವೆ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿರುವುದು ಹಾಗೂ ಕೆಲವರ ಖಾತೆಗಳನ್ನು ಕಸಿದುಕೊಂಡಿರುವುದರಿಂದ ಸಚಿವರು ಬೆಳ್ಳಂಬೆಳಗ್ಗೆಯೇ ಪ್ರತ್ಯೇಕ ಸಭೆ ನಡೆಸುವ ಮೂಲಕ ಬಹಿರಂಗವಾಗಿಯೇ ಅಸಮಧಾನ ಹೊರ ಹಾಕಿದ್ದಾರೆ.
ಈಗಾಗಲೇ ಸಂಪುಟದಲ್ಲಿ ಸ್ಥಾನಮಾನ ಸಿಗದೆ ಕೆಲವು ಶಾಸಕರು ಅಸಮಾಧಾನಗೊಂಡಿರುವ ಬೆನ್ನಲ್ಲೇ ಸಚಿವರ ಖಾತೆ ಬದಲಾವಣೆ ಮಾಡಿರುವುದಕ್ಕೆ ಭಿನ್ನಮತ ಸೋಟಗೊಂಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.
ವೈದ್ಯಕೀಯ ಶಿಕ್ಷಣ ಖಾತೆಯನ್ನು ಬದಲಾವಣೆ ಮಾಡಿರುವುದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ನಿವಾಸದಲ್ಲಿ ಶಾಸಕರು ಸಭೆ ನಡೆಸಿ ಅಸಮಾಧಾನ ಹೊರ ಹಾಕಿದ್ದಾರೆ.
ಸಚಿವರಾದ ಕೆ.ಗೋಪಾಲಯ್ಯ, ಎಂ.ಟಿ.ಬಿ.ನಾಗರಾಜ್, ನಾರಾಯಣಗೌಡ ಸೇರಿದಂತೆ ಮತ್ತಿತರ ಸಚಿವರು ಏಕಾಏಕಿ ಸಿಎಂ ತಮ್ಮ ಗಮನಕ್ಕೂ ತಾರದೆ, ಕನಿಷ್ಠ ಮಾಹಿತಿಯನ್ನೂ ನೀಡದೆ ಖಾತೆಯನ್ನು ಬದಲಾವಣೆ ಮಾಡಿದ್ದಕ್ಕೆ ಆಕ್ರೋಶಗೊಂಡಿದ್ದಾರೆ.
ಇಂದು ಬೆಳ್ಳಂಬೆಳಗ್ಗೆಯೇ ಎಂ.ಟಿ.ಬಿ.ನಾಗರಾಜ್ ಅವರು ಸಿಎಂ ಅಕೃತ ನಿವಾಸ ಕಾವೇರಿಗೆ ಆಗಮಿಸಿ ತಮಗೆ ಈಗ ನೀಡಿರುವ ಖಾತೆ ಬದಲಿಗೆ ವಸತಿ ಖಾತೆಯನ್ನೇ ನೀಡಬೇಕೆಂದು ಪಟ್ಟು ಹಿಡಿದರು. ನಾನು ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದಾಗ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದೇನೆ. ನನಗೆ ನೀವು ನೀಡಿರುವ ಆಶ್ವಾಸನೆಯಂತೆ ವಸತಿ ಇಲಾಖೆಯನ್ನು ನೀಡಬೇಕೆಂದು ಮನವಿ ಮಾಡಿದರು. ಸಿಎಂ ಭೇಟಿಯಾದ ಬಳಿಕ ಬಿ.ವೈ.ವಿಜಯೇಂದ್ರ ಅವರನ್ನೂ ಭೇಟಿಯಾಗಿ ತಮ್ಮ ನೋವು ತೋಡಿಕೊಂಡರು.
ಡಾ.ಕೆ.ಸುಧಾಕರ್ ಅಸಮಾಧಾನ: ಕೋವಿಡ್ ಬಂದ ನಂತರ ಹೆಚ್ಚು ಮುಂಚೂಣಿಗೆ ಬಂದಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಕೂಡ ಮುನಿಸಿಕೊಂಡಿದ್ದಾರೆ. ವೈದ್ಯಕೀಯ ಖಾತೆಯನ್ನು ಬದಲಾವಣೆ ಮಾಡಿರುವ ಸಿಎಂ ನಿರ್ಧಾರಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.
ಇತ್ತೀಚೆಗಷ್ಟೇ ವೈದ್ಯಕೀಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಒಂದೇ ಇಲಾಖೆ ವ್ಯಾಪ್ತಿಗೆ ತರಬೇಕೆಂಬ ಪ್ರಸ್ತಾವನೆ ಇಟ್ಟಿದ್ದರು. ಸಾಲದ್ದಕ್ಕೆ ರಾಷ್ಟ್ರೀಯ ನಾಯಕರ ಮೂಲಕ ತಮ್ಮ ಬಳಿ ಇರುವ ಎರಡೂ ಖಾತೆಯನ್ನು ಬದಲಾವಣೆ ಮಾಡದಂತೆ ಸಿಎಂಗೆ ನಿರ್ದೇಶನ ಮಾಡಬೇಕೆಂದು ಮನವಿ ಮಾಡಿದ್ದರು.
ಇದ್ಯಾವುದನ್ನೂ ಲೆಕ್ಕಸಿದೆ ಡಾ.ಸುಧಾಕರ್ ಬಳಿ ಇದ್ದ ವೈದ್ಯಕೀಯ ಖಾತೆಯನ್ನು ಜೆ.ಸಿ.ಮಾಧುಸ್ವಾಮಿಗೆ ನೀಡಿ ಅವರನ್ನು ಒಂದೇ ಖಾತೆಗೆ ಸೀಮಿತಗೊಳಿಸಿರುವುದು ಅಸಮಾಧಾನಕ್ಕೆ ಮೂಲ ಕಾರಣವಾಗಿದೆ.
ಇಲಾಖೆಯಲ್ಲಿ ಅಷ್ಟೋ-ಇಷ್ಟೋ ಸುಧಾರಣೆ ತರಲು ಮುಂದಾಗಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಕೂಡ ಖಾತೆ ಬದಲಾವಣೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಸಚಿವ ಸುಧಾಕರ್ ಅವರ ನಿವಾಸದಲ್ಲಿ ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ಖಾತೆ ಬದಲಾವಣೆ ಮಾಡುತ್ತೇವೆಂದು ಸಿಎಂ ಸಣ್ಣ ಸುಳಿವು ಕೂಡ ನೀಡರಲಿಲ್ಲ. ನಮ್ಮನ್ನು ಕೇಳಿಯೂ ಇರಲಿಲ್ಲ. ಆದರೆ, ಏಕಾಏಕಿ ಬದಲಾಯಿಸಿರುವುದು ಮನಸ್ಸಿಗೆ ನೋವಾಗಿದೆ ಎಂದು ತಮ್ಮ ಆಪ್ತರ ಬಳಿ ನೋವು ಹಂಚಿಕೊಂಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಮೇಲೆ ಕಣ್ಣಿಟ್ಟಿದ್ದ ಸಚಿವ ಅರವಿಂದ ಲಿಂಬಾವಳಿ ಕೂಡ ಮುನಿಸಿಕೊಂಡಿದ್ದಾರೆ. ಗೃಹ ಇಲ್ಲವೇ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ, ನಿರೀಕ್ಷೆ ಮಾಡದ ಅರಣ್ಯ ಖಾತೆ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲ್ಲವೇ ಇಂಧನ ಖಾತೆಗೆ ಬೇಡಿಕೆ ಇಟ್ಟಿದ್ದ ಸಚಿವ ಮುರುಗೇಶ್ ನಿರಾಣಿ ಕೂಡ ತಮಗೆ ನೀಡಿರುವ ಖಾತೆಗೆ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ. ನನಗೆ ಸಿಎಂ ಒಳ್ಳೆಯ ಖಾತೆ ನೀಡುವ ಭರವಸೆ ಕೊಟ್ಟಿದ್ದರು. ಹಿಂದೆ ನಾನು ಕೈಗಾರಿಕಾ ಸಚಿವನಾಗಿ ಯಶಸ್ವಿಯಾಗಿ ನಿಭಾಯಿಸಿದ್ದೆ. ಗಣಿಗಾರಿಕೆ ನೀಡಿರುವ ಉದ್ದೇಶವಾದರೂ ನನಗೆ ಅರ್ಥವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅರಣ್ಯ ಸಚಿವ ಆನಂದ್‍ಸಿಂಗ್ ಕೂಡ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್‍ಗೆ ರಾಜೀನಾಮೆ ಕೊಟ್ಟು ನಾನು ಬಿಜೆಪಿಗೆ ಬಂದಾಗ ಕೃಷಿ ಖಾತೆ ಕೊಡಲಾಗಿತ್ತು. ಬಳಿಕ ಬದಲಾಯಿಸಿ ಅರಣ್ಯ ಖಾತೆ ನೀಡಲಾಗಿತ್ತು. ಈಗ ಯಾವ ಕಾರಣಕ್ಕಾಗಿ ಖಾತೆ ಬದಲಾವಣೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಉಳಿದಂತೆ ತೋಟಗಾರಿಕೆ ಸಚಿವ ನಾರಾಯಣಗೌಡ ಸೇರಿದಂತೆ ಅನೇಕಸಚಿವರು ಅಸಮಾಧಾನಗೊಂಡಿದ್ದು, ಮುಂದೆ ಇದು ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.