ಬೆಂಗಳೂರು: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಕುರಿತ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿಯಿಂದ ವಿನಾಯಿತಿ ನೀಡಿದೆ.
ಈ ವರ್ಷ ಪರೀಕ್ಷೆಗೆ ಕನಿಷ್ಠ ಹಾಜರಾತಿ ಇರುವುದಿಲ್ಲ. ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು ಎಂಬ ಬಗ್ಗೆ ಜ.11ರಂದು ಉದಯವಾಣಿ’ ವಿಸ್ತೃತ ವರದಿ ಪ್ರಕಟಿಸಿತ್ತು. ಈಗ ಮಂಡಳಿ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ಅದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.
ಜೂನ್ ತಿಂಗಳಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಯ ಪ್ರಕ್ರಿಯೆ ಹೇಗಿರಬೇಕು ಎಂಬುದರ ವಿಸ್ತೃತ ಮಾರ್ಗಸೂಚಿ ಪ್ರಕಟಿಸಿರುವ ಮಂಡಳಿಯು, ಕೋವಿಡ್-19 ಹಿನ್ನೆಲೆಯಲ್ಲಿ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಪರೀಕ್ಷೆಗೆ ಕನಿಷ್ಠ ಹಾಜರಾತಿಯಲ್ಲಿ ವಿನಾಯಿತಿ ನೀಡಿದೆ. ಮಂಡಳಿಯ ಕಾಯ್ದೆ-1966 ನಿಯಮ 37ರ ಅನ್ವಯ ಎಸೆಸೆಲ್ಸಿ ಪರೀಕ್ಷೆ ಬರೆಯುವ ಶಾಲಾ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಕನಿಷ್ಠ ಹಾಜರಾತಿ ಇರಬೇಕು. ಕೋವಿಡ್ ಕಾರಣದಿಂದ ಈ ವರ್ಷ ಹಾಜರಾತಿ ವಿನಾಯಿತಿ ನೀಡಲಾಗಿದೆ ಎಂದು ಮಂಡಳಿ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
ಫೆ. 1ರಿಂದ ವಿವಿಧ ಮಾದರಿಯ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ಶಾಲಾ ಲಾಗಿನ್ ಮೂಲಕ ಆರಂಭವಾಗಲಿದೆ. ಫೆ.15ರವರೆಗೂ ವಿದ್ಯಾರ್ಥಿ ಗಳ ಮಾಹಿತಿ ಅಪ್‌ಲೋಡ್ ಕಾರ್ಯ ನಡೆಯಲಿದೆ. ಫೆ.17ರಿಂದ 22ವರೆಗೆ ಶುಲ್ಕ ಪಾವತಿಗೆ ಅವಕಾಶ ನೀಡಲಾಗಿದೆ.