ಹಾವೇರಿ: ಬಿಎಸ್ ವೈ ಅವರ ಸಿಡಿ ಬಗ್ಗೆ ನಾನು ಹೇಳಿಲ್ಲ. ಆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು. ಅದನ್ನು ನಾನು ಹೇಳಿದ್ದೇನೆ. ನಾನು ಶರಣರ ವಚನಗಳ ಸಿಡಿ ನೋಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಯಡಿಯೂರಪ್ಪ ಸಿಎಂ ಆಗಿರುವರೆಗೂ ನಾನು ಮಂತ್ರಿ ಆಗುವುದಿಲ್ಲ ಎಂದರು.
ನಾನು ಸಚಿವ ಸ್ಥಾನ ಕೇಳಿಲ್ಲ. ಯಾವ್ಯಾವ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲವೋ ಅಂತಹ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡುವಂತೆ ಹೇಳಿದ್ದೇನೆ. ನನಗೆ ಸಚಿವ ಸ್ಥಾನ ಕೊಟ್ಟರೂ ತೆಗೆದುಕೊಳ್ಳೋದಿಲ್ಲ ಎಂದರು.
ಈಗ ಮೋದಿಯವರ ಗಾಳಿಯಿದೆ. ವಲಸಿಗ ಶಾಸಕರೂ ಮೋದಿಯವರಿಗೆ ಜೈ ಎನ್ನುತ್ತಿದ್ದಾರೆ. ನಾಳೆ ಗಾಳಿ ಬೇರೆಯಾದರೆ ಸೋನಿಯಾಕಿ ಜೈ ಎನ್ನುತ್ತಾರೆ, ದೇವೇಗೌಡ ಅಪ್ಪಾಜಿ ಎನ್ನುತ್ತಾರೆ ಎಂದು ಟೀಕಿಸಿದರು.
ಏಪ್ರಿಲ್ ನಂತರ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಬಹಳ ಆಪ್ತರು. ಹೀಗಾಗಿ ಯಡಿಯೂರಪ್ಪ ಯಾವಾಗ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂದು ಅವರಿಗೆ ಗೊತ್ತಿದೆ. ಯಡಿಯೂರಪ್ಪ, ಜಾರ್ಜ್, ಜಮೀರ್ ಅಹಮದ್ ಖಾನ್ ಎಲ್ಲರೂ ಬಹಳ ಆಪ್ತರು ಎಂದು ಟೀಕಿಸಿದರು.
ಗೃಹ ಸಚಿವ ಅಮಿತ್ ಶಾ ಎರಡೂವರೆ ವರ್ಷ ಬಿಜೆಪಿ ಸರಕಾರ ಇರುತ್ತದೆ ಎಂದಿದ್ದಾರೆ. ಯಡಿಯೂರಪ್ಪ ಅವರೇ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳಿಲ್ಲ ಎಂದರು.
Laxmi News 24×7