ಬೆಂಗಳೂರು, ಜ.15- ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಮೊದಲ ಹಂತದಲ್ಲಿ ಸ್ಥಾಪಿಸಿರುವ ಪ್ರಿಂಟೆಕ್ ಪಾರ್ಕ್ ಹಾಗೂ ಕಾಮನ್ ಫೆಸಿಲಿಟಿ ಸೆಂಟರ್ ಜನವರಿ 20ರಂದು ಲೋಕಾರ್ಪಣೆಗೊಳ್ಳಲಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿದ ಅಧ್ಯಕ್ಷರಾದ ಸಿ.ಆರ್.ಜನಾರ್ದನ್ ಹಾಗೂ ಅಶೋಕ್‍ಕುಮಾರ್ ಅವರು ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ಹಲವು ಗಣ್ಯರ ಸಮ್ಮುಖದಲ್ಲಿ ಜನವರಿ 20ರಂದು ಪ್ರಿಂಟೆಕ್ ಪಾರ್ಕ್ ಹಾಗೂ ಕಾಮನ್ ಫೆಸಿಲಿಟಿ ಸೆಂಟರ್ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.ದೇಶದ ಮುದ್ರಣ ಕ್ಷೇತ್ರವು ಕಳೆದ 20 ವರ್ಷಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡಿದೆ. ಭಾರತದ ಮುದ್ರಣ ಕ್ಷೇತ್ರವು ವಿಶ್ವದಲ್ಲಿ ನಾಲ್ಕನೆ ಸ್ಥಾನ ಪಡೆದಿದೆ. ಭಾರತದ ಉಪಖಂಡದಲ್ಲಿ ಸುಮಾರು 3.25 ಲಕ್ಷ ವಿವಿಧ ರೀತಿಯ ಮುದ್ರಣ ಉದ್ದಿಮೆಗಳು ಸ್ಥಾಪನೆಯಾಗಿದ್ದು, ದೇಶದ ಶೇ.1.5ರಷ್ಟು ಜನತೆಗೆ ಉದ್ಯೋಗಾವಕಾಶ ಕಲ್ಪಿಸಿ 50 ಸಾವಿರ ಕೋಟಿ ವಹಿವಾಟು ಹೊಂದಿದೆ ಅವರು ತಿಳಿಸಿದರು.
