ಬೆಳಗಾವಿ: ಅರಣ್ಯ ಇಲಾಖೆಯ ಅನುಮತಿ ಪಡೆಯದೇ 50 ಎಕರೆ ಜಾಗದಲ್ಲಿದ್ದ ಮರಗಳನ್ನು ನಾಶಪಡಿಸಲಾಗಿದೆ ಎಂದು ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡಾಲ ಅಂಕಲಗಿ ಗ್ರಾಮದ ಕೌರಿಗುಡ್ಡದಲ್ಲಿ ಮರಗಳನ್ನು ಕತ್ತರಿಸಲಾಗಿದೆ. ಕಂದಾಯ ಇಲಾಖೆಗೆ ಸೇರಿದ 50 ಎಕರೆ ಜಾಗವನ್ನು ಇಂಧನ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಸೋಲಾರ್ ಪ್ಲ್ಯಾಂಟ್ ನಿರ್ಮಿಸಲು ಲೀಸ್ ಮೂಲಕ ಜಮೀನು ನೀಡಲು ಅನುಮೋದನೆ ನೀಡಲಾಗಿದೆ. ಸೋಲಾರ್ ಪ್ಲ್ಯಾಂಟ್ ಅಳವಡಿಸಲು ಸಾವಿರಾರು ಮರಗಳನ್ನು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಕತ್ತರಿಸಲಾಗಿದೆ ಎಂಬುದು ಆರೋಪ.![]()
ಜೆಸಿಬಿ ಬಳಸಿ ಸಾವಿರಾರು ಮರಗಳನ್ನು ಕಿತ್ತುಹಾಕಲಾಗಿದೆ. ಇದರ ವಿರುದ್ಧ ಸಿಡಿದೆದ್ದಿರುವ ರೈತ ಸಂಘಟನೆಯ ಮುಖಂಡರು, ಗ್ರಾಮಸ್ಥರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇಂಧನ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಲಾರ್ ಪ್ಲ್ಯಾಂಟ್ ನಿರ್ಮಿಸಲು ಬರಡು ಗುಡ್ಡಗಳು ಸಾಕಷ್ಟಿವೆ. ಶ್ರೀಗಂಧ ಸೇರಿ ಅನೇಕ ಮರಗಳು ಇಲ್ಲಿವೆ. ಸಾವಿರಾರು ಮರಗಳನ್ನು ನಾಶಪಡಿಸಿ ಸೋಲಾರ್ ಪ್ಲ್ಯಾಂಟ್ ಮಾಡುವ ಅವಶ್ಯತೆ ಏನಿದೆ?. ಸರ್ಕಾರ ಗುಡ್ಡ ನಾಶಪಡಿಸಲು ಹಠ ತೊಟ್ಟಂತೆ ಕಾಣುತ್ತಿದೆ. ತಕ್ಷಣ ಮರಗಳನ್ನು ನಾಶಪಡಿಸುವುದನ್ನು ನಿಲ್ಲಿಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Laxmi News 24×7