ರಾಯಚೂರು: ಕಳೆದ ವರ್ಷ ನಕ್ಸಲ್ ಚಟುವಟಿಕೆ ತ್ಯಜಿಸಿ ಶರಣಾಗಿದ್ದ ಆರು ಮಂದಿಯನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಅವರು ಕುಟುಂಬಸ್ಥರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಕ್ಸಲ್‌ಮುಕ್ತ ಕರ್ನಾಟಕವೆಂದು ರಾಜ್ಯ ಸರ್ಕಾರ ಘೋಷಿಸಿ ಒಂದು ವರ್ಷ ಗತಿಸಿದೆ. ಹೀಗಿದ್ದರೂ ಸರ್ಕಾರಕ್ಕೆ ಶರಣಾದ ಮಾನವಿ ತಾಲೂಕಿನ ಮಾರೆಪ್ಪ ಆರೋಲಿ, ಮುಂಡಗಾರು ಲತಾ, ಸುಂದರಿ ಕುತ್ತೂರು, ವನಜಾಕ್ಷಿ ಬಾಳೆಹೊಳೆ, ಕೆ.ವಸಂತ, ಟಿ.ಎನ್.ಜೀಶ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಲ್ಲ ಎಂದು ಮಾರೆಪ್ಪ ಆರೋಲಿ ಅವರ ಪುತ್ರ ಚನ್ನಬಸವ ಆಕ್ರೋಶ ವ್ಯಕ್ತಪಡಿಸಿದರು.![]()
ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರುವಾಗ 18 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿತ್ತು. ಇವುಗಳ ಪೈಕಿ ಒಂದೇ ಒಂದು ಬೇಡಿಕೆಯನ್ನೂ ಈಡೇರಿಸಿಲ್ಲ. ಇದರಿಂದಾಗಿ ಮುಖ್ಯವಾಹಿನಿಗೆ ಬಂದ ಆರು ಮಂದಿಯ ಪರಿಸ್ಥಿತಿ ಆಯೋಮಯವಾಗಿದೆ ಎಂದು ಬೇಸರ ಹೊರಹಾಕಿದರು.
“ಮಗ ಮನೆ ಬಿಟ್ಟು ಹೋಗಿದ್ದ. ಇತ್ತೀಚೆಗೆ ಆತ ಇದ್ದಾನೆ ಎಂದು ತಿಳಿಯಿತು. ನನ್ನ ಮಗನನ್ನು ಮನೆಗೆ ಕಳುಹಿಸಿ. ನನಗೆ ವಯಸ್ಸಾಗಿದೆ. ನನ್ನ ಕೊನೆಯ ದಿನಗಳನ್ನು ಮಗನೊಂದಿಗೆ ಕಳೆಯುತ್ತೇನೆ” ಎಂದು ಮಾರೆಪ್ಪ ತಾಯಿ ಗೌರಮ್ಮ ಹೇಳಿದರು.
ಶರಣಾದ ನಕ್ಸಲರ ಮೇಲಿನ ಪ್ರಕರಣಗಳನ್ನು ಹಿಂಪಡೆದು, ಪರಿಹಾರ ಕೊಟ್ಟು ಮುಖ್ಯವಾಹಿನಿಗೆ ತರುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಶಂಕಿತ ನಕ್ಸಲ್ ಮಾರೆಪ್ಪ ಆರೋಲಿ ಸೇರಿ ಬಂಧಿತರು ವರ್ಷವಾದರೂ ಬಿಡುಗಡೆಯಾಗಿಲ್ಲ.
ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಆರು ಜನರನ್ನೂ ಜೈಲಿನಿಂದ ಬಿಡುಗಡೆ ಮಾಡಿ ಕುಟುಂಬದೊಂದಿಗೆ ಬದುಕಲು ಅವಕಾಶ ಮಾಡಿಕೊಡಬೇಕು. ಶರಣಾಗತಿಯ ನಂತರ ಕುಟುಂಬಗಳಿಗೆ ಮರಳುವ ವಿಶ್ವಾಸ ಕುಟುಂಬದವರಲ್ಲಿ ಮೂಡಿತ್ತು. ಆದರೆ ವಿಚಾರಣೆ ಹೆಸರಿನಲ್ಲಿ ವರ್ಷಗಳು ಕಳೆದುಹೋಗುವ ಸಾಧ್ಯತೆ ಇರುವುದರಿಂದ ಸರ್ಕಾರ ಬಿಡುಗಡೆಗೆ ಕ್ರಮ ವಹಿಸಬೇಕೆಂದು ಕುಟುಂಬಸ್ಥರು ಮನವಿ ಮಾಡಿದರು.
Laxmi News 24×7