ವಿಜಯನಗರ: ವಿಶ್ವವಿಖ್ಯಾತ ಹಂಪಿ ಪ್ರವಾಸಕ್ಕೆ ಆಗಮಿಸಿದ್ದ ವಿದೇಶಿ ಪ್ರವಾಸಿಗನೊಬ್ಬ ಗುಡ್ಡ ಏರಲು ತೆರಳಿ ಕಾಲು ಜಾರಿ ಬಿದ್ದು, ಗಾಯಗೊಂಡ ಘಟನೆ ಮಹಾನವಮಿ ದಿಬ್ಬ ಸಮೀಪ ಡಿ.24ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಫ್ರಾನ್ಸ್‌ನ ಬ್ರುನೊ ರೋಜರ್ (52) ಗಾಯಾಳು ಎಂದು ತಿಳಿದುಬಂದಿದೆ.
ಬ್ರುನೊ ರೋಜರ್ ಅವರು ಮಹಾನವಮಿ ದಿಬ್ಬದ ಬಳಿಯ ಅಷ್ಟಭುಜ ಸ್ನಾನಗುಡ್ಡದ ಹಿಂಭಾಗಕ್ಕೆ ತೆರಳಿದ್ದಾರೆ. ಗುಡ್ಡ ಏರಲು ಮುಂದಾಗಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ. ಕಾಲಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಎರಡು ದಿನ ಕಳೆದಿದ್ದಾರೆ![]()
ಇಂದು (ಶುಕ್ರವಾರ) ಸ್ಥಳೀಯರ ಕಣ್ಣಿಗೆ ಕಾಣಿಸಿಕೊಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪುರಾತತ್ವ ಇಲಾಖೆ ಹಾಗೂ ಪೊಲೀಸರು ರಕ್ಷಣೆ ಮಾಡಿ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.
ಸಂಜೆ 6 ಗಂಟೆಯ ಸುಮಾರಿಗೆ ಗುಡ್ಡ ಹತ್ತಲು ಯತ್ನಿಸಿದ್ದ ಬ್ರೂನೊ ರೋಜರ್ ಕಾಲು ಜಾರಿ ಬಿದ್ದಿದ್ದರು. ಅದು ನಿರ್ಜನ ಪ್ರದೇಶವಾಗಿತ್ತು. ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದರಿಂದ ಅವರು ಎರಡು ದಿನ ಅಲ್ಲೇ ಇದ್ದರು. ಬಳಿಕ ಹೇಗೋ ತೆವಳಿಕೊಂಡು ಸಮೀಪದ ಬಾಳೆ ತೋಟಕ್ಕೆ ಇಂದು ಬಂದಿದ್ದಾರೆ. ಸ್ಥಳೀಯ ರೈತರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದ್ದರು.
ಫ್ರಾನ್ಸ್‌ನಿಂದ ಏಕಾಂಗಿಯಾಗಿ ಬಂದಿದ್ದ ರೋಜರ್, ಕಡ್ಡಿರಾಂಪುರದ ಹೋಂ ಸ್ಟೇವೊಂದರಲ್ಲಿ ತಂಗಿದ್ದರು ಎಂಬ ಮಾಹಿತಿ ಇದೆ.
Laxmi News 24×7