ಶಿವಮೊಗ್ಗ: ಕೊನೆಗೂ ಫ್ಯಾನ್ಸ್ ಕಾತರ ಕೊನೆಗೊಂಡಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ‘ಮಾರ್ಕ್’ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿದೆ.
ಶಿವಮೊಗ್ಗ ನಗರದಲ್ಲಿ ಮಾಲ್ ಸಹಿತ 4 ಚಿತ್ರಮಂದಿರಗಳಲ್ಲಿ ಸುದೀಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಬಿಡುಗಡೆ ಆಗಿದೆ. ಬೆಳಗ್ಗೆ 6 ಗಂಟೆಗೆ ಫ್ಯಾನ್ಸ್ ಶೋ ನಡೆಯಿತು. ಈ ಶೋನಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಮೆಚ್ಚಿನ ನಟನನ್ನು ಬಿಗ್ ಸ್ಕ್ರೀನ್ನಲ್ಲಿ ಕಣ್ತುಂಬಿಕೊಂಡರು. ಒಂದು ವರ್ಷದ ಬಳಿಕ ಖ್ಯಾತ ನಟನನ್ನು ದೊಡ್ಡ ಪರದೆ ಮೇಲೆ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ಸಿನಿಮಾ ಕಟೌಟ್‌ಗೆ ಮದ್ಯ ಸುರಿದು ಅಭಿಮಾನ!: ಸಹಜವಾಗಿ ಚಿತ್ರಮಂದಿರದ ಹೊರಗೆ ಅಭಿಮಾನಿಗಳು ನಾಯಕ ನಟನ ಕಟೌಟ್, ಪೋಸ್ಟರ್ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸುತ್ತಾರೆ. ಆದ್ರೆ, ಸುದೀಪ್ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುವುದರ ಬದಲು ಅಭಿಮಾನಿಗಳು ಮದ್ಯ ಸುರಿದರು.
ಚಿತ್ರಮಂದಿರದ ಒಳಗೂ ಹೊರಗೂ ಅಭಿಮಾನಿಗಳು ಕಿಚ್ಚ ಸುದೀಪ್ ಭಾವಚಿತ್ರದ ಬಾವುಟ ಹಿಡಿದು ಭರ್ಜರಿ ಡ್ಯಾನ್ಸ್ ಮಾಡಿದರು. ಚಿತ್ರಮಂದಿರದ ತುಂಬೆಲ್ಲಾ ನಟನ ಬ್ಯಾನರ್, ಬಂಟಿಂಗ್ಸ್ ಹಾಕಿ ಖುಷಿಪಟ್ಟರು. ಚಿತ್ರ ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದರು.
ಕರ್ನಾಟಕ ಹಾಗೂ ತಮಿಳುನಾಡು ಸೇರಿ ಹಲವೆಡೆ ಅದ್ಧೂರಿಯಾಗಿ ಸಿನಿಮಾ ತೆರೆಕಂಡಿದೆ. ರಾಜ್ಯದಲ್ಲಿ 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸುದೀಪ್ ಪುತ್ರಿ ಸಾನ್ವಿ ಮತ್ತು ಪತ್ನಿ ಪ್ರಿಯಾ ಅವರು ಬೆಂಗಳೂರಿನ ಫೇಮಸ್ ಥಿಯೇಟರ್ನಲ್ಲಿ ಮುಂಜಾನೆಯೇ ಅಭಿಮಾನಿಗಳ ಜೊತೆ ಕುಳಿತು ಚಿತ್ರ ವೀಕ್ಷಿಸಿ ಸಂಭ್ರಮಿಸಿದ್ದಾರೆ.
Laxmi News 24×7