ಚಿಕ್ಕೋಡಿ(ಬೆಳಗಾವಿ): ಆಧುನಿಕ ಕಬ್ಬು ಕಟಾವು ಮಷಿನ್ಗೆ ಸಿಲುಕಿ ಇಬ್ಬರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಬೌರವ್ವ ಲಕ್ಷ್ಮಣ್ ಕೋಬಡೆ (58) ಹಾಗೂ ಲಕ್ಷ್ಮಿಬಾಯಿ ಮಲ್ಲಪ್ಪ ರುದ್ರಗೌಡರ (60) ಸ್ಥಳದಲ್ಲೇ ಮೃತಪಟ್ಟವರು. ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಚಾಲಕನ ಅಜಾಗರೂಕತೆಯಿಂದ ಮಷಿನ್ ಮೈಮೇಲೆ ಹಾಯ್ದು ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಾಲಕನ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬೆನ್ನಲ್ಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ಬಗ್ಗೆ ಸ್ಥಳೀಯ ರೈತ ಮಹಾಂತೇಶ ಕೋಬಡ್ಡಿ ಮಾತನಾಡಿ, ”ಇಬ್ಬರು ನಿತ್ಯದಂತೆ ಕೆಲಸಕ್ಕೆ ತೇರಳಿದ್ದರು. ಮಷಿನ್ ಮುಖಾಂತರ ಕಬ್ಬು ಕಟಾವು ಮಾಡಲಾಗುತ್ತಿತ್ತು. ಆದರೆ ಮಷಿನ್ ಜೊತೆ ಇರುವ ಎನ್ಫಿಲ್ಡ್ (ಮೆಷಿನ್ ಕಟಾವು ಮಾಡಿದ ಕಬ್ಬನ್ನು ಹೊರಗೆ ಸರಬರಾಜು ಮಾಡುವ ಟ್ರ್ಯಾಕ್ಟರ್) ಚಾಲಕನಿಗೆ ಇಬ್ಬರೂ ಕಾಣದೇ ಇರುವುದರಿಂದ, ಮಹಿಳೆಯ ಮೇಲೆ ಹರಿದಿದೆ. ಇದರಿಂದ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ” ಎಂದು ಮಾಹಿತಿ ನೀಡಿದರು.
Laxmi News 24×7