ವಿಜಯಪುರದ ಚಡಚಣ ಪಟ್ಟಣದಲ್ಲಿ ಅಪಹರಣವಾಗಿದ್ದ ಒಂದೂವರೆ ವರ್ಷದ ಮಗು ಸುರಕ್ಷಿತ ಪತ್ತೆ; ಕೃತ್ಯ ಎಸಗಿದ ಮಹಿಳೆಯ ಶೋಧ ಮುಂದುವರಿಕೆ!
ಅಪಹರಣವಾದ ಒಂದೂವರೆ ವರ್ಷದ ಮಗು ಸುರಕ್ಷಿತ ಪತ್ತೆ!
ಸಂಗಮೇಶ್ವರ ದೇವಾಲಯ ಬಳಿ ಮಗುವನ್ನು ಬಿಟ್ಟಿದ್ದರು
ಮಗುವನ್ನು ಪೋಷಕರಿಗೆ ಹಸ್ತಾಂತರಿಸಿದ ಪೊಲೀಸರು
ನೀಲಿ ಸೀರೆ ಮಹಿಳೆಯ ಪತ್ತೆಗಾಗಿ ತನಿಖೆ ಮುಂದುವರಿಕೆ
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಒಂದೂವರೆ ವರ್ಷದ ಗಂಡು ಮಗು ಕಳ್ಳತನ ಪ್ರಕರಣಕ್ಕೆ ಸುಖಾಂತ್ಯ ಕಂಡಿದೆ.ಅಪಹರಣವಾದ ಮಗು ಮರಳಿ ಸುರಕ್ಷಿತವಾಗಿ ತಂದೆ ತಾಯಿಯ ಮಡಿಲಲ್ಲಿ ಸೇರಿದೆ.
ಚಡಚಣದ ಶಿವಾಜಿ ನಗರ ಪ್ರದೇಶದಲ್ಲಿ ಮೊಹಮ್ಮದ್ ಮಾಜ್ ಚಾಂದಶೇಖ್ ಎಂಬ ಮಗು ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಮನೆಯ ಎದುರು ಆಟವಾಡುತ್ತಿದ್ದ ವೇಳೆ ಅಜ್ಞಾತ ಮಹಿಳೆ ಮಗುನ್ನು ಎತ್ತಿಕೊಂಡು ಹೋಗಿದ್ದಳು. ಘಟನೆಯ ನಂತರ ಆತಂಕಗೊಂಡ ಮಗುವಿನ ಪೋಷಕರು ತಕ್ಷಣವೇ ಚಡಚಣ ಪೊಲೀಸ್ ಠಾಣೆಗೆ ದೂರು ನೀಡಿದರು.
ಪೋಷಕರಿಂದ ಮಾಹಿತಿ ಪಡೆದ ಪೊಲೀಸರು ತಕ್ಷಣ ತಂಡಗಳನ್ನು ರಚಿಸಿ ಹುಡುಕಾಟ ಆರಂಭಿಸಿದರು. ತೀವ್ರ ಹುಡುಕಾಟದ ನಡುವೆ ಚಡಚಣದ ಸಂಗಮೇಶ್ವರ ದೇವಸ್ಥಾನದ ಹತ್ತಿರ ಮಹಿಳೆ ಮಗುವನ್ನು ಬಿಟ್ಟು ಹೋಗಿದ್ದ ಮಾಹಿತಿ ಲಭ್ಯವಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ಸುರಕ್ಷಿತವಾಗಿ ತಮ್ಮ ತಾಬೆಗೆ ತೆಗೆದುಕೊಂಡಿದ್ದಾರೆ. ಮಗು ಆರೋಗ್ಯವಾಗಿದ್ದು, ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಕೃತ್ಯಕ್ಕೆ ಮುಂದಾದ ಮಹಿಳೆಯ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಈಗ ಸುಖಾಂತ್ಯ ದೊರೆತಿದ್ದು, ಸ್ಥಳೀಯರಲ್ಲಿ ನೆಮ್ಮದಿ ಮೂಡಿಸಿದೆ.
Laxmi News 24×7