ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೇಳಿಬಂತು.
ಕೆ.ಸಿ.ವೇಣುಗೋಪಾಲ್ ಅವರು ಮಂಗಳೂರಿನಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಗಾಂಧೀಜಿ- ನಾರಾಯಣ ಗುರುಗಳ ಸಂವಾದ ಶತಮಾನೋತ್ಸವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಈ ವೇಳೆ ನೂರಾರು ಮಂದಿ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಕೆ.ಸಿ.ವೇಣುಗೋಪಾಲ್ ಬರುತ್ತಿದ್ದಂತೆ ಕಾರ್ಯಕರ್ತರ ಕಡೆಯಿಂದ ಡಿ.ಕೆ., ಡಿ.ಕೆ. ಎಂಬ ಘೋಷಣೆ ಕೇಳಿಬಂದಿದೆ.
ಸಿಎಂ ಬದಲಾವಣೆ ಬಗ್ಗೆ ಮಾಧ್ಯಮದವರು ಪ್ರಶ್ನಿಸಲು ಪ್ರಯತ್ನಿಸಿದರೂ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯಿಸಲು ನಿರಾಕರಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, “ಕೆ.ಸಿ.ವೇಣುಗೋಪಾಲ್ ಅವರು ಕಾಂಗ್ರೆಸ್ ಕಾರ್ಯಕ್ರಮಕ್ಕೆ ಮಂಗಳೂರಿಗೆ ಆಗಮಿಸಿದ್ದಾರೆ. ಆದ್ದರಿಂದ ನಾವು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಘೋಷಣೆ ಮಾಡಿದ್ದೇವೆ. ನಮಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇಬ್ಬರೂ ನಾಯಕರೇ. ಇದರಲ್ಲಿ ಬೇರೆ ಅರ್ಥವಿಲ್ಲ” ಎಂದು ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ಅವರ ನಡುವೆ 1924ರಲ್ಲಿ ನಡೆದ ಐತಿಹಾಸಿಕ ‘ವರ್ಕಲ ಶಿವಗಿರಿ ಸಂವಾದ’ಕ್ಕೆ ಈಗ ಶತಮಾನದ ವರ್ಷ. ‘ಗುರು- ಗಾಂಧಿ’ಯವರ ಸಂವಾದದ ಮೌಲ್ಯಗಳನ್ನು ಮತ್ತೆ ನೆನಪಿಸುವ ಆಶಯದಿಂದ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ‘ಶತಮಾನದ ಮಹಾಪ್ರಸ್ಥಾನ’ ಕಾರ್ಯಕ್ರಮ ನಡೆಯಲಿದೆ.
ಶಿವಗಿರಿ ಮಠ ವರ್ಕಲ ಹಾಗೂ ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ, ಶ್ರೀ ಗುರುವಿನ ಮಹಾ ಸಮಾಧಿ ಶತಾಬ್ದ ಸರ್ವಮತ ಸಮ್ಮೇಳನ ಶತಮಾನೋತ್ಸವ ಹಾಗೂ ಯತಿ ಪೂಜೆ ನೆರವೇರಲಿದೆ.
ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದು, ಲೋಕಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ ಪ್ರಧಾನ ಸಂದೇಶ ಭಾಷಣ ಮಾಡಲಿದ್ದಾರೆ. ಶಿವಗಿರಿ ಮಠದ ಸ್ವಾಮೀಜಿ ಶುಭಾಂಗಾನಂದ ಪರಿನಿರ್ವಾಣ ಸಂದೇಶ ಭಾಷಣ ಮಾಡಲಿದ್ದಾರೆ. ಶಿವಗಿರಿ ಮಠದ ಶ್ರೀಮತ್ ಶಾರದಾನಂದ, ಸ್ವಾಮಿ ರೀತಾಂಭರಾನಂದ, ಸ್ವಾಮಿ ಆಸಂಗಾನಂದಗಿರಿ, ಸ್ವಾಮಿ ಜಿತಕಾಮಾನಂದಜಿ, ಕೇಂ ದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಸಚಿವರಾದ ಜಮೀರ್‌ಅಹ್ಮದ್, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಳರ್ ಮುಂತಾದವರು ಭಾಗವಹಿಸಲಿದ್ದಾರೆ.
Laxmi News 24×7