ಬೆಳಗಾವಿ : ಭಗವದ್ಗೀತೆ ಪ್ರತಿಯೊಬ್ಬರ ಜೀವನಕ್ಕೆ, ಇಡೀ ಮಾನವ ಕುಲಕ್ಕೆ ಮಾರ್ಗದರ್ಶನ ಮಾಡುವ ಗ್ರಂಥ ಎಂದು ಕರಿಯರ್ ಎಕ್ಸೆಲ್ ನಿರ್ದೇಶಕ, ನಿವೃತ್ತ ಪ್ರಾಧ್ಯಾಪಕ ವಿನೋಧ ದೇಶಪಾಂಡೆ ಹೇಳಿದ್ದಾರೆ.
ಇಲ್ಲಿಯ ಸಂತಮೀರಾ ಶಾಲೆಯಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ಶನಿವಾರ ನಡೆದ ಭಗವದ್ಗೀತೆ ಅಭಿಯಾನದ ಸ್ಫರ್ಧಾ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಭಗವದ್ಗೀತೆ ಬೇರೆಲ್ಲ ಗ್ರಂಥಗಳ ಸಮಾವೇಶ ಇದ್ದಂತೆ. ಅದನ್ನು ಓದಿದರೆ ಎಲ್ಲ ವೇದ, ಪುರಾಣಗಳನ್ನೂ ಓದಿದಂತೆ. ಬದುಕಿನ ದಾರಿದೀಪ ಅದು. ಮೂಲತಃ ಅದರಲ್ಲಿ ಒಂದು ಲಕ್ಷ ಶ್ಲೋಕಗಳಿವೆ, ಈಗ 700ಕ್ಕೆ ಇಳಿದಿದೆ. ಪ್ರತಿಬಾರಿ ಓದಿದಾಗಲೂ ಅದರಲ್ಲಿ ಹೊಸದನ್ನು ಕಾಣಬಹುದು, ಸಣ್ಣ ವ.ಸ್ಸಿನಿಂದಲೇ ಅದನ್ನು ಓದಬೇಕು. ಇದರಿಂದ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಜಯತೀರ್ಥ ಸವದತ್ತಿ ಮಾತನಾಡಿ, ಕೃಷ್ಣನ ಮಹಿಮೆ ಅಪಾರವಾಗಿದೆ. ಭಗವದ್ಗೀತೆ ಪಠಣ ಮಾಡಿದವರಿಗೆ ಜೀವನದಲ್ಲಿ ಜಯ ಸಿಕ್ಕೇ ಸಿಗುತ್ತದೆ. ತಂದೆ- ತಾಯಿಯರಿಗೆ, ಹಿರಿಯರಿಗೆ ಗೌರವ ನೀಡುವ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು.
ಭಗವದ್ಗೀತೆ ಅಭಿಯಾನ ಸಮಿತಿ ಜಿಲ್ಲಾಧ್ಯಕ್ಷ ಪರಮೇಶ್ವರ ಹೆಗಡೆ, ಭಗವದ್ಗೀತೆ ದೇವರ ಸಂದೇಶ. ಬೇರೆ ದೇಶಗಳಲ್ಲಿ ಭಗವದ್ಗೀತೆ ಮತ್ತು ಸಂಸ್ಕೃತ ಭಾಷೆಯ ಕುರಿತು ಹೆಚ್ಚು ಮಹತ್ವ ನೀಡಲಾಗುತ್ತಿದೆ. ಆದರೆ ನಮ್ಮಲ್ಲಿ ಅದು ಕಡಿಮೆಯಾಗುತ್ತಿದೆ, ಮನಸ್ಸನ್ನು ಕೆಡಿಸುವ ಚಟುವಟಿಕೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ 2007ರಿಂದ ಭಗವದ್ಗೀತೆ ಅಭಿಯಾನ ನಡೆಸುತ್ತಿದೆ ಎಂದರು.
ಭಗವದ್ಗೀತೆ ಅಭಿಯಾನ ಸಮಿತಿ ಕಾರ್ಯದರ್ಶಿ ಎಂ.ಕೆ.ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟ್, ಸಂತಮೀರಾ ಶಾಲೆಯ ಆಡಳಿತಾಧಿಕಾರಿ ಆರ್.ಕೆ.ಕುಲಕರ್ಣಿ, ಪ್ರಾಚಾರ್ಯೆ ಸುಜಾತಾ ದಪ್ತಾರದಾರ ಮೊದಲಾದವರು ಉಪಸ್ಥಿತರಿದ್ದರು. ನಿರ್ಣಾಕರ ಪರವಾಗಿ ಸವಿತಾ ಜೋಶಿ ಮಾತನಾಡಿದರು. ಮಂಗಲಾ ಮೈತ್ರಿ, ಸಂಧ್ಯಾ ಭಟ್, ಗೀತಾ ಪರಮೇಶ್ವರ ಹೆಗಡೆ, ವಿದ್ಯಾ ಗುರು, ಗೀತಾ ಸತೀಶ್ ಹೆಗಡೆ, ವೆಂಕಟೇಶ ಉಪಾಧ್ಯಾಯ, ಚೈತ್ರಾ ಸಾಗರ ಹೆಗಡೆ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಸುಜಾತಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ವಿಜೇತರ ವಿವಿರ : ಕಂಠಪಾಠ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಕೌಸ್ತುಬ ಭಟ್ ಪ್ರಥಮ, ಮೇಹುಲ್ ಶೀಲವಂತ ದ್ವಿತೀಯ, ಪ್ರೌಢ ವಿಭಾಗದಲ್ಲಿ ಶ್ರಾವ್ಯ ಭಟ್ ಪ್ರಥಮ,
ಗೌತಮಿ ಕಂಗ್ರಾಳಕರ್ ದ್ವಿತೀಯ, ಭಾಷಣ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಅಶ್ವಿಕ ಹಡಪದ್ ಪ್ರಥಮ, ಚಿನ್ಮಯಿ ಜೋಶಿ ದ್ವಿತೀಯ, ಪ್ರೌಢ ವಿಭಾಗದಲ್ಲಿ ಶಾಂಭವಿ ಸ್ವಾಮಿ ಪ್ರಥಮ, ಶ್ರೀನಿಧಿ ಯಲ್ಗೋಡ ದ್ವಿತೀಯ ಬಹುಮಾನ ಪಡೆದರು.
Laxmi News 24×7