ಭ್ರಷ್ಟಾಚಾರದಲ್ಲಿ ರಾಜ್ಯ ನಂ.1, ಗ್ಯಾರಂಟಿಗಳಲ್ಲಿ ಕಾಲಹರಣ
ಕಾಂಗ್ರೆಸ್ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ
ಅಭಿವೃದ್ಧಿ ಸಂಪೂರ್ಣ ನಿಂತಿದೆ
ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಏಕೆ?;ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ‘ಏಕತಾ ನಡಿಗೆ’ ಕಾರ್ಯಕ್ರಮದ ನಂತರ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಬಹಳ ಹಿಂದೆ ಬಿದ್ದಿದೆ ಎಂದು ಅವರು ಆರೋಪಿಸಿದರು.
ಕೈ ಸರ್ಕಾರ ಗ್ಯಾರಂಟಿಗಳನ್ನೇ ಕೊಟ್ಟು, ಅದರಲ್ಲಿಯೇ ಕಾಲ ಹರಣ ಮಾಡುತ್ತಿದೆ. ಈ ರಾಜ್ಯವು ಇಂದು ಭ್ರಷ್ಟಾಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ,” ಎಂದು ನಾರಾಯಣಸ್ವಾಮಿ ಗುಡುಗಿದರು. “ಎರಡುವರೆ ವರ್ಷ ಮುಗಿದಿದೆ, ಇನ್ನೆರಡೂವರೆ ವರ್ಷ ಬಾಕಿ ಇದೆ. ಈಗ ಆಗಿದ್ದೇನು? ಮುಂದೆ ಆಗಬೇಕಿರುವ ಸ್ಪಷ್ಟ ನಕಾಶೆ (ಮ್ಯಾಪ್) ಸರ್ಕಾರದ ಮುಂದಿಲ್ಲ” ಎಂದು ಟೀಕಿಸಿದರು.
ಸದ್ಯ ಸರ್ಕಾರದಲ್ಲಿ ನಡೆಯುತ್ತಿರುವ ಆಂತರಿಕ ವಿಷಯಗಳ ಕುರಿತು ಅವರು ಬೆಳಕು ಚೆಲ್ಲಿದರು. “ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅರ್ಧ ಡಜನ್ ನಾಯಕರು ಕ್ಯೂನಲ್ಲಿ ನಿಂತಿದ್ದಾರೆ. ಕಳೆದ ಒಂದು ತಿಂಗಳಿಂದ ಸಂಪುಟ ಪುನಾರಚನೆ ಕಾರ್ಯ ನಡೆಯುತ್ತಿದೆ. ಸರ್ಕಾರ ಈ ಎರಡು ವಿಚಾರಗಳನ್ನೇ ಇಟ್ಟುಕೊಂಡು ಹೊರಟಿದೆ,” ಎಂದು ಅವರು ಆಪಾದಿಸಿದರು.
ಅತೀವೃಷ್ಟಿ ಪರಿಹಾರ ಕಾರ್ಯಗಳ ಕುರಿತು ಮಾತನಾಡಿದ ಅವರು, “ನಾವು ಹೋರಾಟ ಮಾಡಿದ ನಂತರ ಸರ್ಕಾರ ಎಚ್ಚೆತ್ತುಕೊಂಡಿತು. ರಸ್ತೆಗಳು ವಾಹನಗಳು ಓಡದಷ್ಟು ತಗ್ಗು ಬಿದ್ದಿದ್ದವು. ಕೇವಲ ಘೋಷಣೆಯಿಂದ ಹೊಟ್ಟೆ ತುಂಬುವುದಿಲ್ಲ, ಪರಿಹಾರ ಕೊಡಬೇಕು,” ಎಂದು ಆಗ್ರಹಿಸಿದರು.
ಅಲ್ಲದೆ, “ಬೆಂಗಳೂರು ಅಭಿವೃದ್ಧಿಯಾದರೆ, ಇಡೀ ಕರ್ನಾಟಕ ಅಭಿವೃದ್ಧಿಯಾದಂತಲ್ಲ. ಮೊದಲು ಗುಲ್ಬರ್ಗ (ಕಲ್ಯಾಣ ಕರ್ನಾಟಕ) ಕಡೆಯಿಂದ ಅನುದಾನ ಕೊಡದಿದ್ದರೆ ಪ್ರತ್ಯೇಕ ರಾಜ್ಯ ಬೇಕು ಎಂಬ ಧ್ವನಿ ಬರುತ್ತಿತ್ತು. ಈಗ ಬೆಳಗಾವಿ (ಉತ್ತರ ಕರ್ನಾಟಕ) ಕಡೆಯಿಂದ ಅದೇ ಧ್ವನಿ ಬರುತ್ತಿದೆ. ಇಡೀ ರಾಜ್ಯದ ಅಭಿವೃದ್ಧಿ ಸರ್ಕಾರದ ಮುಂದಿಲ್ಲ,” ಎಂದರು.
Laxmi News 24×7