ಬೆಳಗಾವಿ/ಬೆಂಗಳೂರು: ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಮೊನ್ನೆ (ನ.13) 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇಂದು ಬೆಳಗ್ಗೆ ಮತ್ತೆ 20 ಕೃಷ್ಣಮೃಗಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ‘ಮಾಹಿತಿ ನೀಡಿದ್ದಾರೆ.
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸಂಬಂಧ ಡಿಎಫ್ಒ ಎನ್.ಇ.ಕ್ರಾಂತಿ ಅವರನ್ನು ಈಟಿವಿ ಭಾರತ ಪ್ರತಿನಿಧಿ ಸಂಪರ್ಕಿಸಿದಾಗ, ”ಬ್ಯಾಕ್ಟಿರಿಯಲ್ ಇಂಜೆಕ್ಷನ್ನಿಂದ ಕೃಷ್ಣಮೃಗಗಳು ಮೃತಪಟ್ಟಿವೆ. ಬೆಂಗಳೂರಿನ ಬನ್ನೇರುಘಟ್ಟದ ಪಶು ವಿಜ್ಞಾನ ಸಂಸ್ಥೆಯ ತಜ್ಞ ವೈದ್ಯರು ಬರುತ್ತಿದ್ದು, ಅವರು ಪರೀಕ್ಷೆ ನಡೆಸಲಿದ್ದಾರೆ. ಮೊನ್ನೆ 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇಂದು ಮತ್ತೆ 20 ಮೃತಪಟ್ಟಿವೆ. ಇದರಿಂದ ಒಟ್ಟು 28 ಜಿಂಕೆಗಳು ಸಾವನ್ನಪ್ಪಿರುವುದು ಆಘಾತಕಾರಿ ಸಂಗತಿ” ಎಂದು ತಿಳಿಸಿದರು.
ಕಿತ್ತೂರು ಚೆನ್ನಮ್ಮ ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಗಳು ಇದ್ದವು. ಅದರಲ್ಲಿ ಈಗ 10 ಕೃಷ್ಣಮೃಗಗಳು ಮಾತ್ರ ಉಳಿದಿವೆ. ಎಸಿಎಫ್ ನಾಗರಾಜ ಬಾಳೇಹೊಸೂರ, ಮೃಗಾಲಯ ಸಂರಕ್ಷಣಾಧಿಕಾರಿ ಪವನ್ ಕುರನಿಂಗ, ಆರೋಗ್ಯ ಅಧಿಕಾರಿ ಸೇರಿ ಮತ್ತಿತರು ಸ್ಥಳದಲ್ಲಿಯೇ ಇದ್ದು, ಇನ್ನುಳಿದ ಪ್ರಾಣಿಗಳ ಆರೋಗ್ಯ ತಪಾಸಣೆಯಲ್ಲಿ ನಿರತರಾಗಿದ್ದಾರೆ.
Laxmi News 24×7