ಬಾಗಲಕೋಟೆ: ಕಬ್ಬು ಬೆಳೆಗೆ ದರ ನಿಗದಿ ಸಂಬಂಧಪಟ್ಟಂತೆ ನಡೆಯುತ್ತಿರುವ ರೈತರ ಹೋರಾಟ ಇಬ್ಬರು ಸಚಿವರ ಸಂಧಾನದಿಂದಾಗಿ ಯಶಸ್ಸು ಕಂಡಿದ್ದು, ರೈತರ ಹೋರಾಟ ಸಮಾಪ್ತಿಗೊಂಡಿದೆ. ಕಳೆದ ದಿನ ಕಬ್ಬು ತುಂಬಿದ ಟ್ರ್ಯಾಕ್ಟರ್ಗೆ ಬೆಂಕಿ ಹಚ್ಚಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ರೈತರು & ಸಕ್ಕರೆ ಕಾರ್ಖಾನೆ ಮಾಲೀಕರ ಮಧ್ಯೆ ಸಂಧಾನ ಸಭೆ ನಡೆಸಿ, ರೈತರ ಹೋರಾಟ ಕೈಬಿಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
15 ದಿನಗಳ ಹೋರಾಟದ ಬಳಿಕ ಮಾತುಕತೆ ಯಶಸ್ವಿಯಾಗಿದ್ದು, ಹೋರಾಟ ಸುಖ್ಯಾಂತ ಕಂಡಿದೆ. ಮುಧೋಳ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ರೈತರೊಂದಿಗೆ ಸಚಿವರು ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇತರ ಅಧಿಕಾರಗಳ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.
ಈ ಮೊದಲು ನಿಗದಿಯಾದಂತೆ ಪ್ರತಿ ಟನ್ಗೆ 3300 ನೀಡುವುದು: ಮಾತುಕತೆಯಂತೆ ಮೊದಲ ಹಂತದಲ್ಲಿ 3200 ಕೊಡುವುದು. ಎರಡನೇ ಹಂತದಲ್ಲಿ ಸರ್ಕಾರದಿಂದ 50 ರೂಪಾಯಿ ಹಾಗೂ ಕಾರ್ಖಾನೆಯಿಂದ 50ರೂ. ಸೇರಿ 100 ಕೊಡುವುದು ಎಂದು ತೀರ್ಮಾನಿಸಲಾಗಿದೆ. ಘೋಷಣೆಯಾದ ಬೆಲೆಯನ್ನು 14 ದಿನಗಳಲ್ಲಿ ಕಾರ್ಖಾನೆ ಮಾಲೀಕರು ರೈತರಿಗೆ ಸಂದಾಯ ಮಾಡಬೇಕಿದೆ. ಈ ಹಿಂದಿನ ಬಾಕಿ ಬಗ್ಗೆ ಮುಚ್ಚಳಿಕೆ ಬರೆದುಕೊಡಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ.
ಸಚಿವರೊಂದಿಗಿನ ಸಭೆಯ ಬಗ್ಗೆ ರೈತ ಮುಖಂಡರಾದ ಬಸವಂತಪ್ಪ ಕಾಂಬಳೆ ಮಾತನಾಡಿದ್ದು, ನಾಲ್ಕು ಸಕ್ಕರೆ ಕಾರ್ಖಾನೆಯವರು ಮುಚ್ಚಳಿಕೆ ಪತ್ರ ನೀಡುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಇದಕ್ಕೆ ಒಪ್ಪಿಗೆ ನೀಡಿದ್ದು, ಹೋರಾಟ ಅಂತ್ಯಗೊಳಿಸಲಾಗುವುದು. ಮತ್ತೆ ಚಳಿಗಾಲ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲು ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಸಭೆ ಬಗ್ಗೆ ಸಚಿವ ತಿಮ್ಮಾಪುರ ಹೇಳಿಕೆ: ಕಾರ್ಖಾನೆ ಆಡಳಿತ ಮಂಡಳಿಯ ಜೊತೆಗೆ ನಡೆದ ಸಭೆಯಲ್ಲಿ ರೈತರು ಒಪ್ಪಿಕೊಂಡಿದ್ದಾರೆ. ನಾಲ್ಕು ಕಾರ್ಖಾನೆಯವರ ಮಾತ್ರ ದರ ನಿಗದಿಗೆ ಸಂಭಂದಪಟ್ಟಂತೆ ವಿವಾದವಾಗಿತ್ತು. ಈಗ ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ. ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿರುವುದು ವಿಷಾದನೀಯ ಸಂಗತಿಯಾಗಿದೆ. ಹಾನಿಗೆ ಒಳಗಾಗಿರುವ ರೈತರಿಗೆ ಪರಿಹಾರ ನೀಡುವ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪೂರ ತಿಳಿಸಿದರು.
Laxmi News 24×7