ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದ ಹೊರಭಾಗದಲ್ಲಿರುವ ಮಾಲವಿ ಜಲಾಶಯದ ಮಣ್ಣಿನ ಗೋಡೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದ್ದು, ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2.50 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಮಾಲವಿ ಜಲಾಶಯ, ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಭರ್ತಿಯಾಗಿದೆ. ಆದ್ರೆ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಕೃಷಿ ಚಟುವಟಿಕೆಗೆ ಬಳಕೆಯಾಗಬೇಕಿದ್ದ ಜಲಾಶಯದ ನೀರು ವ್ಯರ್ಥವಾಗಿ ಹರಿಯುತ್ತಿದೆ.
ಕ್ರಸ್ಟ್ ಗೇಟ್ ಸಮಸ್ಯೆಯಿಂದ ನೀರು ಪೋಲಾಗುತ್ತಿದೆ. ಪೋಲಾಗುತ್ತಿರುವ ನೀರು ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಒಡೆದಿರುವ ಮಣ್ಣಿನ ಗೋಡೆ ದುರಸ್ಥಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ತುಂಗಭದ್ರಾ ಜಲಾಶಯದ ಹಿನ್ನೀರಲ್ಲಿ ಮುಳುಗಿ ಇಬ್ಬರು ಸಹೋದರರು ಸಾವು: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಇಬ್ಬರು ಸಹೋದರರು ಮುಳುಗಿ ಸಾವನ್ನಪ್ಪಿದ ಘಟನೆ ಕಳೆದ ಸೋಮವಾರ ರಾತ್ರಿ ನಡೆದಿತ್ತು. ಪಟ್ಟಣ ಸಮೀಪದ ಹಂಪಿನಕಟ್ಟೆ ಗ್ರಾಮದ ಕೂಲಿಕಾರ್ಮಿಕ ರಾಜಾಭಕ್ಷಿ (30) ಮತ್ತು ಅವರ ತಮ್ಮ ಬೀದರ್ ಜಿಲ್ಲೆ ಹುಮನಬಾದ್ನಲ್ಲಿ ಗ್ರಾಮ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ ಬಾರಿ ಇಮಾಂ (26) ಮೃತರು.
ಇಬ್ಬರೂ ಅವಿವಾಹಿತರು. ಕಳೆದ ಭಾನುವಾರ ಮನೆಯಲ್ಲಿ ಗ್ಯಾರ್ವಿ ಹಬ್ಬ ಆಚರಿಸಿಕೊಂಡಿದ್ದರು. ಸೋಮವಾರ ಸಂಜೆ ಕುಟುಂಬದ ಇತರೆ ಏಳು ಜನ ಸದಸ್ಯರೊಂದಿಗೆ ಸಮೀಪದ ಎಂಎಸ್ಪಿಎಲ್ ಕ್ರಾಸ್ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರ ಪ್ರದೇಶಕ್ಕೆ ವನಭೋಜನಕ್ಕೆ ತೆರಳಿದ್ದರು. ಈಜು ಬಾರದ ಇಬ್ಬರು ನದಿಗೆ ಇಳಿದಿದ್ದಾಗ ಕಾಲು ಜಾರಿ ಬಿದ್ದು ಮುಳುಗಿದ್ದಾರೆ. ನಂತರ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಸಿಬ್ಬಂದಿ ಬಂದು ಮೃತದೇಹಗಳನ್ನು ಹೊರತೆಗೆದರು ಎಂದು ಪೊಲೀಸರು ತಿಳಿಸಿದ್ದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಭೇಟಿ ನೀಡಿ ಪರಿಶೀಲಿಸಿದ್ದರು. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿನಿಮಾ ನೋಡಲು ಹೋದವರು ನೀರುಪಾಲು: ಕಾಲುವೆಗೆ ಈಜಲು ಹೋದಾಗ ನಾಪತ್ತೆಯಾದ ಇಬ್ಬರು ಯುವಕರು ಶವವಾಗಿ ಪತ್ತೆಯಾದ ಕುರಿತು ಸಂಶಯ ವ್ಯಕ್ತವಾಗಿ ಮಸ್ಕಿ ಠಾಣೆಯಲ್ಲಿ ಅಕ್ಟೋಬರ್ 6 ರಂದು ದೂರು ದಾಖಲಾಗಿತ್ತು. ಲಿಂಗಸೂಗೂರು ತಾಲೂಕಿನ ಮುದಗಲ್ ನಿವಾಸಿಗಳಾದ ಯಲ್ಲಾಲಿಂಗ ಹಾಗೂ ವೆಂಕಟೇಶ ಎಂಬಿಬ್ಬರು ಮುದಗಲ್ನಿಂದ ಮಸ್ಕಿ ಪಟ್ಟಣಕ್ಕೆ ಕಾಂತಾರ ಸಿನಿಮಾ ನೋಡಲು ಬಂದಿದ್ದರು. ಆದ್ರೆ ಸಿನಿಮಾ ಟಿಕೆಟ್ ಸಿಗಲಿಲ್ಲವೆಂದು ಮಸ್ಕಿ ಪಟ್ಟಣದ ತುಂಗಭದ್ರಾ ಎಡದಂಡೆ ನಾಲೆಗೆ ಈಜಲು ತೆರಳಿದ್ದರು. ಈ ವೇಳೆ ಇಬ್ಬರೂ ಕಾಲುವೆಯಲ್ಲಿ ಕಾಣೆಯಾಗಿದ್ದರು.
Laxmi News 24×7