ಬೆಂಗಳೂರು: ಈವರೆಗೆ ಕನಿಷ್ಠ 50 ಕಾರ್ಮಿಕರಿರುವ ಅಂಗಡಿ, ಸಂಸ್ಥೆಗಳಿಂದ ಕಾರ್ಮಿಕ ನಿಧಿ ವಂತಿಕೆ ಸಂಗ್ರಹಿಸಲಾಗುತ್ತಿದೆ. ಇನ್ನು ಮುಂದೆ ಕನಿಷ್ಠ 10 ಕಾರ್ಮಿಕರಿರುವ ಅಂಗಡಿ, ಸಂಸ್ಥೆಗಳಿಂದ ಕಾರ್ಮಿಕ ನಿಧಿ ವಂತಿಕೆ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿಯಮ ತಿದ್ದುಪಡಿಗೆ ಮುಂದಾಗಿದೆ.
ಕಾರ್ಮಿಕರ ಕಲ್ಯಾಣ ನಿಧಿ: ಈ ಮೊತ್ತದಲ್ಲಿ ರಾಜ್ಯದಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರಿಗಾಗಿ ಮಂಡಳಿ ವತಿಯಿಂದ 7 ಕಲ್ಯಾಣ ಯೋಜನೆಗಳನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣವನ್ನು ಸಂವರ್ಧನೆಗೊಳಿಸುವುದಕ್ಕಾಗಿ ಒಂದು ನಿಧಿಯನ್ನು ರಚಿಸಲಾಗಿದೆ. ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ 1965 ಆಗಸ್ಟ್ 5ರಂದು ಜಾರಿಗೆ ಬಂದಿದೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ 1965 ರಲ್ಲಿ ರಚನೆಯಾಗಿದ್ದು, ಪ್ರಸ್ತುತ ಕಾರ್ಖಾನೆಗಳ ಕಾಯ್ದೆಯಲ್ಲಿ ನೋಂದಾಯಿತ ಕಾರ್ಖಾನೆಗಳು/ಪ್ಲಾಂಟೇಶನ್ಗಳು/ ಕಾರ್ಯಗಾರಗಳು/ ಮೋಟಾರು ವಾಹನ ಸಾರಿಗೆ ಸಂಸ್ಥೆಗಳು ಹಾಗೂ 50 ಕ್ಕಿಂತ ಹೆಚ್ಚಿನ ಸಿಬ್ಬಂದಿ ಕಾರ್ಮಿಕರನ್ನು ನೇಮಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ/ ಐಟಿ.ಬಿಟಿ. ಸಂಸ್ಥೆಗಳು/ಚಾರಿಟಬಲ್ ಸಂಸ್ಥೆಗಳು ಮತ್ತು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ನೋಂದಣಿಯಾದ ಎಲ್ಲಾ ಸಂಘ ಸಂಸ್ಥೆಗಳು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ಪ್ರತಿ ವರ್ಷ ವಂತಿಕೆ ನೀಡಬೇಕು.
ಈ ಕಲ್ಯಾಣ ನಿಧಿಯಿಂದ ರಾಜ್ಯದಲ್ಲಿ ಸಂಘಟಿತ ವಲಯದ ಕಾರ್ಮಿಕರಿಗೆ ಹಲವು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಪ್ರಮುಖವಾಗಿ ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ, ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ, ಮೃತ ಕಾರ್ಮಿಕರ ಅಂತ್ಯಸಂಸ್ಕಾರಕ್ಕೆ ಸಹಾಯಧನ, ಕಾರ್ಮಿಕರಿಗೆ ವೈದ್ಯಕೀಯ ನೆರವು, ಕಾರ್ಮಿಕರಿಗೆ ಅಪಘಾತ ಸಹಾಯಧನ ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ.
ರಾಜ್ಯದಲ್ಲಿನ ಕಾರ್ಮಿಕರಿಗಾಗಿ ಒಟ್ಟು ಏಳು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ತಿದ್ದುಪಡಿ ಮೂಲಕ ಕಲ್ಯಾಣ ನಿಧಿಗೆ ವಂತಿಕೆ ಸಂಗ್ರಹಣೆಯ ವ್ಯಾಪ್ತಿಯನ್ನು ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಮತ್ತು ಅವಲಂಬಿತರಿಗೆ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮತ್ತು ಮಂಡಳಿಗೆ ಪಾವತಿಸಲಾಗುವ ವಂತಿಕೆ ಮೊತ್ತವು ಸಕಾಲದಲ್ಲಿ ಹಾಗೂ ಶೀಘ್ರವಾಗಿ ಮಂಡಳಿಯ ಖಾತೆಗೆ ಜಮೆಯಾಗುವ ನಿಟ್ಟಿನಲ್ಲಿ ತಿದ್ದುಪಡಿ ತರಲಾಗುತ್ತಿದೆ.
Laxmi News 24×7