ಬೆಂಗಳೂರು: ಬೆಂಗಳೂರಿನ ಐದು ಹೊಸ ನಗರ ಪಾಲಿಕೆಗಳ ಕರಡು ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆ ಪ್ರಕಟಿಸಲಾಗಿದ್ದು, ನಾಗರಿಕರಿಂದ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಆಹ್ವಾನಿಸಿದೆ.
ಐದು ಪಾಲಿಕೆಗಳಾಗಿ ವಿಂಗಡಣೆ: ಸರ್ಕಾರ ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ ನೂತನವಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಗಳನ್ನು ರಚಿಸಿದೆ. ಈ ಸಂಬಂಧ ವಾರ್ಡ್‌ಗಳ ಪುನರ್ ವಿಂಗಡಣೆಗಾಗಿ 3 ತಿಂಗಳ ಅವಧಿಗೆ ಸೀಮಿತವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗವನ್ನು ರಚಿಸಲಾಗಿತ್ತು.
ಸರ್ಕಾರಕ್ಕೆ ವಾರ್ಡ್‌ಗಳ ಪುನರ್ ವಿಂಗಡಣಾ ವರದಿ ಸಲ್ಲಿಕೆ: ಇದರ ಜೊತೆಗೆ ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಬೆಂಗಳೂರು ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ವಾರ್ಡ್ ಗಳ ಪುನರ್‌ವಿಂಗಡಣೆಯನ್ನು ಮಾಡಲು ಮಾರ್ಗಸೂಚಿಗಳನ್ನು ರಚಿಸಲಾಗಿತ್ತು. ಅದರಂತೆ, ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗ 30-09-2025ರಂದು ಸರ್ಕಾರಕ್ಕೆ ವಾರ್ಡ್‌ಗಳ ಪುನರ್ ವಿಂಗಡಣಾ ವರದಿಯನ್ನು ಸಲ್ಲಿಸಿದೆ. ಸರ್ಕಾರ ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗದ ವರದಿಯನ್ನು ಒಪ್ಪಿ, ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಅನ್ವಯ 2011ರ ಜನಗಣತಿಯ ಆಧಾರದ ಮೇರೆಗೆ, ಗ್ರೇಟರ್ ಬೆಂಗಳೂರು ಪ್ರದೇಶದ 5 ನಗರ ಪಾಲಿಕೆಗಳ ಕರಡು ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ನಿಗದಿಪಡಿಸಿದೆ.
5 ನಗರ ಪಾಲಿಕೆಗಳ ಕರಡು ವಾರ್ಡುಗಳ ಸಂಖ್ಯೆ:
- ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 63
- ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 72
- ಬೆಂಗಳೂರು ಪೂರ್ವ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 50
- ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 111
- ಬೆಂಗಳೂರು ಉತ್ತರ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 72
ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ: ಕರಡು ವಾರ್ಡುವಾರು ಪುನರ್ವಿಂಗಡನೆ ಸಂಬಂಧ ಯಾವುದೇ ಆಕ್ಷೇಪಣೆ / ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವವರು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಕಾರಣ-ವಿವರಣೆಗಳೊಂದಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆ / ಸಲಹೆಗಳನ್ನು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಕೊಠಡಿ ಸಂಖ್ಯೆ: 436, 4ನೇ ಮಹಡಿ, ವಿಕಾಸಸೌಧ, ಡಾ. ಬಿ.ಆರ್ ಅಂಬೇಡ್ಕರ್ ವೀದಿ, ಬೆಂಗಳೂರು-560001 ಇವರಿಗೆ 15-10-2025 ರಂದು ಅಪರಾಹ್ನ 5 ಗಂಟೆಯ ಒಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
ನಿಗದಿತ ಅವಧಿಯಲ್ಲಿ ಸ್ವೀಕೃತಗೊಂಡ ಆಕ್ಷೇಪಣೆ/ಸಲಹೆಗಳನ್ನು ಪರಿಶೀಲಿಸಿ. ವಾರ್ಡ್ ವಾರು ಕ್ಷೇತ್ರ ಪುನರ್‌ವಿಂಗಡಣೆಯನ್ನು ಅಂತಿಮಗೊಳಿಸಲು ಕ್ರಮವಹಿಸಲಾಗುವುದು ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.