ಮೈಸೂರು: ಹಿರಿಯ ಸಾಹಿತಿ ಹಾಗೂ ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಚಾಮುಂಡಿ ಬೆಟ್ಟದ ರುದ್ರ ಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳಂತೆ ಅವರ ಹಿರಿಯ ಮಗ ರವಿಶಂಕರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಕಿರಿಯ ಮಗ ಉದಯಶಂಕರ್ ಇದ್ದರು.
ಬುಧವಾರ ನಿಧನರಾದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ (94) ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರ ಭೂಮಿಯಲ್ಲಿ ಸರ್ಕಾರದ ಸಕಲ ಗೌರವದೊಂದಿಗೆ ನೆರವೇರಿಸಲಾಯಿತು. ಈ ಸಂರ್ಭದಲ್ಲಿ ಭೈರಪ್ಪ ಅವರ ಹಿರಿಯ ಮಗ ರವಿಶಂಕರ್, ಕಿರಿಯ ಮಗ ಉದಯಶಂಕರ್ ಹಾಗೂ ಜೊತೆಗೆ ಭೈರಪ್ಪನವರನ್ನು ನೋಡಿಕೊಳ್ಳುತ್ತಿದ್ದ ಸಹನ ವಿಜಯಕುಮಾರ ಇದ್ದರು.
ಭೈರಪ್ಪರ ಮನೆಯಲ್ಲಿ ಅಂತಿಮ ದರ್ಶನ ವ್ಯವಸ್ಥೆ: ನಿನ್ನೆ ಗುರುವಾರ ಬೆಂಗಳೂರಿನಿಂದ ಮೈಸೂರಿಗೆ ತರಲಾಗಿದ್ದ ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಕಲಾಮಂದಿರದ ಆವರಣದಲ್ಲಿ ಇಡಲಾಗಿತ್ತು. ಅಲ್ಲಿ ಗಣ್ಯರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಹೆಚ್.ಸಿ. ಮಹದೇವಪ್ಪ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದಿದ್ದರು. ಬಳಿಕ ಸಂಜೆ ಪಾರ್ಥಿವ ಶರೀರವನ್ನು ಜೆಎಸ್ಎಸ್ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಇಂದು ಬೆಳಗ್ಗೆ ಭೈರಪ್ಪ ಅವರ ಪಾರ್ಥಿವ ಶರೀರವನ್ನು ಅವರ ಕುವೆಂಪು ನಗರದ ಮನೆಗೆ ತಂದು ಅಭಿಮಾನಿಗಳು ಹಾಗೂ ನೆರೆ ಹೊರೆಯವರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮನೆಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಪೂರೈಸಿ ನಂತರ ಚಾಮುಂಡಿ ಬೆಟ್ಟದ ಬಳಿಯ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಯಿತು.
Laxmi News 24×7